Kannada Bible — Kannada (ಕನ್ನಡ)
1 ಕೇಳಿದೆವು ಕಿವಿಯಾರೆ ದೇವಾ, ನೀ ಎಸಗಿದ ಘನಕಾರ್ಯಗಳನು I ವಿವರಿಸಿಹರು ನಮ್ಮ ಪೂರ್ವಜರು ನಿನ್ನಾ ಮಹತ್ಕಾರ್ಯಗಳನು II
2 ಹೊರಗಟ್ಟಿದೆ ಪರಕೀಯರನು, ನಮ್ಮ ಪೂರ್ವಜರ ನೆಲೆಗೊಳಿಸಲು I ವಿನಾಶಗೊಳಿಸಿದೆ ಅನ್ಯರನು, ನಮ್ಮವರನು ವಿಕಾಸಗೊಳಿಸಲು II
3 ನಾಡ ಗೆದ್ದುದು ನಮ್ಮವರ ಕತ್ತಿಯಲ್ಲ I ಜಯ ದೊರೆತದು ತಮ್ಮ ಭುಜಬಲದಿಂದಲ್ಲ II ಜಯ ತಂದಿತು ನಿನ್ನ ಬಲಹಸ್ತ, ನಿನ್ನ ಮುಖಕಾಂತಿ I ನಿನ್ನ ಭುಜಬಲ, ನೀ ತೋರಿದಾ ಅಚಲಪ್ರೀತಿ II
4 ಯಕೋಬಿಗೆ ವಿಜಯ ಗಿಟ್ಟಿಸಿದಾತ I ನೀನಲ್ಲವೆ ದೇವಾ, ನನ್ನ ಅರಸ? II
5 ಶತ್ರುಗಳನು ಸದೆಬಡಿವೆವು ನಿನ್ನ ಬೆಂಬಲದಿಂದ I ಎದುರಾಳಿಯನು ತುಳಿವೆವು ನಿನ್ನ ಆವೇಶದಿಂದ II
6 ಬಿಲ್ಲುಬಾಣದಲಿ ನಾ ಭರವಸೆಯಿಡುವುದಿಲ್ಲ I ಕತ್ತಿ ಕಠಾರಿ ನನಗೆ ರಕ್ಷಣೆ ತರುವುದಿಲ್ಲ II
7 ಹಿಂಸಕರಿಂದ ಸಂರಕ್ಷಿಸುವಾತ ನೀನೆ I ಹಗೆಗಳಿಗೆ ಆಶಾಭಂಗ ತರುವಾತ ನೀನೆ II
8 ನಿನ್ನಲ್ಲಿಯೇ ದೇವಾ, ಹೆಮ್ಮೆಪಡುವೆವು ಸತತ I ನಿನ್ನ ನಾಮವನೆ ಸಂಕೀರ್ತಿಸುವೆವು ನಿರುತ II
9 ಆದರೀಗ ನಮ್ಮನು ಕಡೆಗಣಿಸಿರುವೆ, ಕೈ ಬಿಟ್ಟಿರುವೆ I ನಮ್ಮ ಸೇನೆಗಳ ಸಂಗಡ ದೇವ, ಹೊರಟು ಬರದಿರುವೆ II
10 ಶತ್ರುಗಳಿಗೆ ಬೆಂಗೊಟ್ಟು ನಾವೋಡುವಂತೆ ಮಾಡಿರುವೆ I ಹಗೆಗಳು ಹಾಯಾಗಿ ಸೊತ್ತನು ಸೂರೆಮಾಡ ಬಿಟ್ಟಿರುವೆ II
11 ನಮ್ಮನೊಪ್ಪಿಸಿರುವೆ ವಧ್ಯಸ್ಥಾನಕೊಯ್ದ ಕುರಿಗಳಂತೆ I ಚದರಿಸಿಬಿಟ್ಟಿರುವೆ ನಮ್ಮನು ಅನ್ಯ ಜನಾಂಗಗಳ ಮಧ್ಯೆ II
12 ಬಿಡುಕಾಸಿಗಿಂತ ಕಡೆಗಾಣಿಸಿರುವೆ ನಿನ್ನ ಪ್ರಜೆಯನು I ಲಾಭವಿಲ್ಲದವರಂತೆ ವಿಕ್ರಯಿಸಿರುವೆ ಅದನು II
13 ಪರರು ನಮ್ಮನು ಜರೆಯುವಂತೆ ಮಾಡಿರುವೆ I ನೆರೆಯವರ ಪರಿಹಾಸ್ಯಕ್ಕೆ ಗುರಿಪಡಿಸಿರುವೆ II
14 ಅನ್ಯಜನ ನಮ್ಮನಣಕಿಸಿ ತಲೆಯಾಡಿಸುವಂತೆ ಮಾಡಿರುವೆ I ಅನ್ಯಾಯಕ್ಕೆ ಅಡ್ಡಹೆಸರಾಗುವಂತೆ ನಮ್ಮನು ಬಿಟ್ಟಿರುವೆ II
15 ನನ್ನ ಕಣ್ಮುಂದಿದೆ ಈ ಅವಮಾನ ದಿನವೆಲ್ಲ I ಲಜ್ಜೆಯಿಂದ ನಾ ಮುಖ ಮುಚ್ಚಿಕೊಳ್ಳುವಂತಾಗಿದೆಯಲ್ಲಾ II
16 ದೂಷಕರ ನಿಂದೆಗೆ ಆಸ್ಪದನಾದೆ I ದ್ರೋಹಿಗಳ ವಕ್ರನೋಟಕೆ ಗುರಿಯಾದೆ II
17 ನಿನ್ನ ಮರೆಯಲಿಲ್ಲ, ನಿನ್ನ ಒಪ್ಪಂದವನು ಮೀರಲಿಲ್ಲ I ಆದರೂ ಒದಗಿವೆಯಲ್ಲ ನಮಗೀ ಅನಾಹುತಗಳೆಲ್ಲ II
18 ನಮ್ಮಂತರಂಗ ದೂರವಾಗಿಲ್ಲ ನಿನ್ನಿಂದ I ನಾವು ಅಗಲಲಿಲ್ಲ ನೀನು ತೋರಿದ ಮಾರ್ಗದಿಂದ II
19 ಆದರೂ ನಮ್ಮನ್ನು ತಂದು ನಾಯಿನರಿಗಳ ಪಾಲಾಗಿಸಿರುವೆ I ಕಾರ್ಗತ್ತಲೆಮ್ಮನು ಸುತ್ತುವರಿಯುವಂತೆ ಮಾಡಿರುವೆ II
20 ನಮ್ಮ ದೇವನ ನಾಮವನು ಮರೆತಿದ್ದೆವಾದರೆ I ಅನ್ಯದೇವರಿಗೆ ನಾವು ಕೈ ಮುಗಿದಿದ್ದೆವಾದರೆ, II
21 ದೇವಾ, ನಿನಗದು ಬಯಲಾಗದಿರುತ್ತಿತ್ತೆ? I ನಮ್ಮೆದೆ ಗುಟ್ಟು ನಿನಗೆ ತಿಳಿಯದಿರುತ್ತಿತ್ತೆ? II
22 ಎಣಿಕೆಯಾಗಿಹೆವು ಕೊಯ್ಗುರಿಗಳಂತೆ ನಾವೆಲ್ಲ I ಬಲಿಯಾಗುತಿಹೆವು ನಿನ್ನ ನಿಮಿತ್ತವೆ ದಿನವೆಲ್ಲ II
23 ಪ್ರಭೂ, ಎದ್ದೇಳು, ನಿದ್ರಿಸಬೇಡ I ನಮ್ಮನು ಎಂದೆಂದಿಗೂ ತೊರೆಯಬೇಡ II
24 ಮರೆಸಿಕೊಂಡಿರುವೆಯೇಕೆ ನಿನ್ನ ಮುಖವನು? I ಮರೆತಿರುವೆಯೇಕೆ ನಮ್ಮ ಹಿಂಸೆ ಬಾಧೆಯನು? II
25 ಮಣ್ಣುಪಾಲಾಗಿದೆ ನಮ್ಮ ಪ್ರಾಣ I ನೆಲ ಕಚ್ಚಿಕೊಂಡಿದೆ ನಮ್ಮ ದೇಹ II
26 ಎದ್ದು ಬಂದು ಪ್ರಭು ನಿನ್ನ ನೆರವನ್ನೊದಗಿಸು I ನಿನ್ನಚಲ ಪ್ರೇಮದಿಂದ ನಮ್ಮನು ಉದ್ಧರಿಸು II