ಕೀರ್ತನೆಗಳು 42 (Psalms 42)

Kannada Bible — Kannada (ಕನ್ನಡ)

1 ಬಾಯಾರಿದ ಜಿಂಕೆ ಹಾತೊರೆಯುವಂತೆ ತೊರೆಗಾಗಿ I ದಣಿದೆನ್ನ ಮನ ದೇವಾ, ಹಂಬಲಿಸುತಿದೆ ನಿನಗಾಗಿ II

2 ಜೀವಂತ ದೇವನಿಗಾಗಿ ದಾಹದಿಂದಿದೆ ಎನ್ನ ಮನ I ನಾ ತೆರಳಿ ಪಡೆವುದೆಂತು ಆ ದೇವನ ಮುಖದರ್ಶನ? II

3 “ಎಲ್ಲಿ? ನಿನ್ನ ದೇವನೆಲ್ಲಿ?” ಎಂದು ಜನ ಜರೆಯುತಿರಲು I ಕಂಬನಿಯೆ ನನಗನ್ನಪಾನವಾಗಿಹುದು ಹಗಲಿರುಳು II

4 ಜನಸಮೂಹದೊಡನೆ ನಾ ಜಯಜಯಕಾರ ಮಾಡುತ I ಸ್ತುತಿಗೀತೆಗಳ ಹಾಡುತ, ತೀರ್ಥಯಾತ್ರೆ ಗೈಯುತ I ದೇಗುಲಕೆ ತೆರಳಿದಾ ಸವಿನೆನಪು ಮನಕರಗಿಪುದು ನಿರುತ II

5 ಎನ್ನ ಮನವೆ, ಚಿಂತಿಸುವೆಯೇಕೆ? I ವ್ಯಥೆಪಡುವುದೇಕೆ? ದೇವನಲ್ಲಿಡು ನಂಬಿಕೆ I ಮತ್ತೆ ಸ್ತುತಿಸುವೆ ನಾನಾತನನು, ಮುಕ್ತಿದಾತ, ಪರಮಾತ್ಮ ಆತನೆನಗೆ II

6 ನನಗಾಗುತ್ತದೆ ನಿನ್ನ ಸ್ಮರಣೆ ಮನ ಕುಗ್ಗಿದಾಗ I ಜೋರ್ದನ್, ಹೆರ್ಮನ್ ನಾಡಿಂದ, ಮೀಸಾರ್ ಗುಡ್ಡೆಯಿಂದ II

7 ನಿನ್ನ ಜಲಪಾತಗಳ ಘನನಿನಾದ, ಮಡುವು ಮಡುವನು ಕರೆದಂತಿದೆ I ನಿನ್ನಲೆಗಳು, ಎಲ್ಲ ತರಂಗಗಳು ತಲೆಯ ಮೇಲೆ ಹಾದು ಹೋದಂತಿವೆ II

8 ಹಗಲಲಿ ಪ್ರೀತಿಯನುಗ್ರಹಿಸಲಿ ದೇವನೆನಗೆ I ಇರುಳಲಿ ಎನ್ನಯ ಬಾಯಲ್ಲಿರಲಿ ಆತನ ಗೀತೆ I ಪ್ರಾರ್ಥನೆ ಸಲ್ಲಲಿ ಎನ್ನ ಜೀವಾಧಾರ ದೇವಗೆ II

9 ಶರಣ ದೇವನಿಗೆ “ದೇವಾ, ನನ್ನನೇಕೆ ಮರೆತೆ? I ನಾನಲೆಯಬೇಕೆ ಶತ್ರುಬಾಧೆಪೀಡಿತನಾಗಿ ಭಿಕಾರಿಯಂತೆ?” II

10 “ನಿನ್ನ ದೇವನೆಲ್ಲಿ?” ಎಂದು ವಿರೋಧಿಗಳು ಸತತ ಹಂಗಿಸುವಾಗ I ನನ್ನೆಲುಬುಗಳು ಮುರಿದಂತಾಗುತ್ತದೆ ಆ ಜರೆಯ ಕೇಳಿದಾಗ II

11 ಎನ್ನ ಮನವೆ, ಚಿಂತಿಸುವೆಯೇಕೆ? ವ್ಯಥೆಪಡುವುದೇಕೆ? ದೇವನಲ್ಲಿಡು ನಂಬಿಕೆ I ಮತ್ತೆ ಸ್ತುತಿಸುವೆ ನಾನಾತನನು, ಮುಕ್ತಿದಾತ, ಪರಮಾತ್ಮ ಆತನೆನಗೆ II

  • Psalms 41 — previous chapter
  • Psalms 43 — next chapter
  • Psalms 42 — English (KJV)
  • Psalms 42 — English (WEB)
  • Psalms 42 — Tamil (தமிழ்)
  • Psalms 42 — Hindi (हिंदी)
  • Psalms 42 — Malayalam (മലയാളം)