Kannada Bible — Kannada (ಕನ್ನಡ)
1 ದೇವಾ, ನನ್ನೊಡೆಯಾ, ಮಾಡುವೆ ನಿನ್ನ ಗುಣಗಾನ I ಯುಗಯುಗಾಂತರಕ್ಕೂ ನಿನ್ನ ನಾಮಕ್ಕೆ ನಮನ II
2 ಹೊಗಳುವೆನು ನಾ ದಿನದಿನವೂ ನಿನ್ನನು I ಭಜಿಸುವೆನೆಂದೆಂದಿಗೂ ನಿನ್ನ ಹೆಸರನು II
3 ಪ್ರಭು ಮಹಾತ್ಮನು, ಸ್ತುತ್ಯರ್ಹನು I ಆತನ ಮಹಿಮೆ ಅಗಮ್ಯವಾದದು II
4 ತಲೆಮಾರು ತಲೆಮಾರಿಗೆ ನುತಿಸುವುದು ನಿನ್ನ ಕಾರ್ಯಗಳನು I ತಿಳಸುವುದು ಪ್ರಭು, ನೀ ಮಾಡಿದೆಲ್ಲಾ ಮಹತ್ಕಾರ್ಯಗಳನು II
5 ಧ್ಯಾನಿಸುವೆನು ನಿನ್ನ ಅದ್ಭುತಕಾರ್ಯಗಳನು I ನಿನ್ನ ಮಹೋನ್ನತ ಮಹಿಮಾಪ್ರಭಾವವನು II
6 ಜನರು ಸಾರುವರು ನಿನ್ನ ಅದ್ಭುತ ಶಕ್ತಿಯನು I ನಾ ಪ್ರಸಿದ್ಧಪಡಿಸುವೆನು ನಿನ್ನ ಮಹಿಮೆಯನು II
7 ಪ್ರಕಟಿಸುವರವರು ನಿನ್ನ ಮಹೋಪಕಾರವನು I ಹಾಡಿ ಹೊಗಳುವರು ನಿನ್ನ ನ್ಯಾಯನೀತಿಯನು II
8 ಪ್ರಭು ದಯಾನಿಧಿ, ಕೃಪಾಸಾಗರನು I ಸಹನಶೀಲನು, ಪ್ರೀತಿಪೂರ್ಣನು II
9 ಪ್ರಭುವಿನ ಕರುಣೆ ಎಲ್ಲರ ಮೇಲೆ I ಆತನ ಕೃಪೆಯು ಸೃಷ್ಟಿಯ ಮೇಲೆ II
10 ಪ್ರಭು, ನಿನ್ನನು ಸ್ತುತಿಪುದು ಸೃಷ್ಟಿಯೆಲ್ಲವು I ಕೊಂಡಾಡುವುದು ನಿನ್ನನು ಭಕ್ತ ಸಮೂಹವು II
11 ಪ್ರಸಿದ್ಧಪಡಿಸುವರು ನಿನ್ನ ರಾಜ್ಯದ ಮಹತ್ವವನು I ವರ್ಣಿಸುವರವರು ನಿನ್ನ ಶಕ್ತಿ ಸಾಮರ್ಥ್ಯವನು II
12 ಅರಿವರಿಂತು ಜನರು ನಿನ್ನ ಶೂರ ಕಾರ್ಯಗಳನು I ಗ್ರಹಿಸುವರು ನಿನ್ನ ರಾಜ್ಯದ ಮಹಿಮೆ ಪ್ರಭಾವವನು II
13 ಶಾಶ್ವತವಾದುದು ನಿನ್ನ ರಾಜ್ಯವು I ಇರುವುದೆಂದಿಗು ನಿನ್ನ ಆಳ್ವಿಕೆಯು II
14 ನುಡಿಯಲಿ ಪ್ರಭು ಸದಾ ಪ್ರಾಮಾಣಿಕನು I ನಡೆಯಲಿ ಆತನು ಸದಾ ಪ್ರೀತಿಮಯನು II
15 ಎತ್ತುವನಾತ ಬಿದ್ದವರನೆಲ್ಲ I ಉದ್ಧರಿಪನು ಕುಗ್ಗಿದವರನೆಲ್ಲ II
16 ಎಲ್ಲ ಜೀವಿಗಳ ಕಣ್ಣು ಪ್ರಭು, ನಾಟಿವೆ ನಿನ್ನ ಕಡೆಗೆ I ಕಾಲಕಾಲಕೆ ಕೊಡುವೆ ಆಹಾರವನು ಅವುಗಳಿಗೆ II
17 ಎಲ್ಲ ಜೀವಿಗಳಿಗೆ ನೀ ಕೈ ನೀಡುವವನು I ಎಲ್ಲರ ಕೋರಿಕೆಗಳನು ಈಡೇರಿಸುವವನು II
18 ಪ್ರಭುವಿನ ಮಾರ್ಗ ಧರ್ಮಸಮ್ಮತ I ಆತನ ಕಾರ್ಯವೆಲ್ಲ ಪುನೀತ II
19 ಹತ್ತಿರ ಇಹನು ಪ್ರಭು ಕರೆಯುವವರೆಲ್ಲರಿಗೆ I ಯಥಾರ್ಥವಾಗಿ ಆತನನು ಅರಸುವವರಿಗೆ II
20 ಹೆದರಿ ನಡೆಯುವವರ ಇಷ್ಟವನು ಈಡೇರಿಸುವನು I ಅವರ ಮೊರೆಯನು ಕೇಳಿ ಅವರನು ರಕ್ಷಿಸುವನು II
21 ಸಲಹುವನು ತನ್ನನು ಪ್ರೀತಿಸುವವರೆಲ್ಲರನು I ನಾಶಮಾಡುವನು ದುರ್ಮಾರ್ಗಿಗಳೆಲ್ಲರನು II
22 ಉಸುರುತಿದೆ ನನ್ನ ನಾಲಿಗೆ ಪ್ರಭುವಿನ ಸ್ತೋತ್ರವನು I ನರರೆಲ್ಲರು ಸ್ತುತಿಸಲಿ ಸತತ ಆತನ ಶ್ರೀನಾಮವನು II