Kannada Bible — Kannada (ಕನ್ನಡ)
1 ಕಿವಿಗೊಡು ಪ್ರಭು, ನನ್ನ ಪ್ರಾರ್ಥನೆಗೆ I ನನ್ನ ಕೂಗು ಸೇರಲಿ ನಿನ್ನ ಬಳಿಗೆ II
2 ಕಷ್ಟಕಾಲದೊಳು ವಿಮುಖನಾಗಬೇಡ ನೀನೆನಗೆ I ಕಿವಿಗೊಡು, ಮೊರೆಯಿಡುವಾಗಲೆ, ಸದುತ್ತರಿಸು ಬೇಗನೆ II
3 ಮಾಯವಾಗುತ್ತಿದೆ ನನ್ನೀ ಜೀವಮಾನ ಹೊಗೆಯಂತೆ I ಉರಿಯುತ್ತಿವೆ ಎನ್ನೆಲುಬುಗಳು ಒಲೆಯಲ್ಲಿಟ್ಟ ಕೊರಡಿನಂತೆ II
4 ಬಿಸಿಲಿಗೆ ಬಾಡಿದ ಹುಲ್ಲಿನಂತಿದೆ ಎನ್ನೆದೆ I ತಿಂಡಿತೀರ್ಥವನುಣ್ಣಲೂ ನಾ ಮರೆತುಹೋದೆ II
5 ಕೂಗಿ ನಾ ನಿಟ್ಟುಸಿರಿಟ್ಟೆ I ಎಲುಬು ತೊಗಲು ಆಗಿಬಿಟ್ಟೆ II
6 ಅಡವಿಯ ರಣಹದ್ದಿಗೆ ಸಮನಾದೆ I ಹಾಳುರಿನ ಗೂಗೆಯ ಹಾಗಾದೆ II
7 ಮನೆಮೇಲಿನ ಒಂಟಿ ಪಕ್ಷಿಯಾದೆ I ಬಳಲುತ್ತಿರುವೆನು ನಿದ್ರೆಯಿಲ್ಲದೆ II
8 ವೈರಿಗಳು ದಿನವಿಡೀ ನನ್ನ ನಿಂದಿಸುತ್ತಿಹರು I ದ್ವೇಷಿಗಳು ನನ್ನ ಹೆಸರೆತ್ತಿ ಶಪಿಸುತ್ತಿಹರು II
9 ಬೂದಿಯೇ ನನಗೆ ಆಹಾರವಾಯಿತು I ಪಾನದಲಿ ಕಣ್ಣೀರು ಮಿಶ್ರವಾಯಿತು II
10 ನಿನ್ನ ಕೋಪತಾಪಗಳೆ ಕಾರಣ ಇದಕ್ಕೆಲ್ಲಾ I ನನ್ನನು ಮೇಲಕ್ಕೆತ್ತಿ ಬಿಸಾಡಿಬಿಟ್ಟಿರುವೆಯಲ್ಲಾ II
11 ನನ್ನ ಬಾಳು ಬೈಗಿನ ನೆರಳಂತೆ I ನಾನಿರುವೆ ಬಾಡಿದ ಹುಲ್ಲಿನಂತೆ II
12 ನೀನಾದರೋ ಪ್ರಭು, ಸದಾ ಸಿಂಹಾಸನಾರೂಢ I ಮಾಳ್ಪರು ತಲತಲಾಂತರಕು ನಿನ್ನ ನಾಮಸ್ಮರಣ II
13 ಎದ್ದು ಸಿಯೋನಿಗೆ ತೋರು ಸೌಜನ್ಯತೆ I ಅದಕ್ಕೆ ದಯೆತೋರಿಸುವ ಸಮಯವಿದೇ I ನಿಯಮಿತ ಕಾಲವಿದೋ ಬಂದುಬಿಟ್ಟಿದೆ II
14 ಕಲ್ಲುಕುಪ್ಪೆಯಾಗಿದ್ದರೂ ನಿನ್ನ ಭಕ್ತರಿಗದು ಪ್ರಿಯ I ಅದರ ವಿನಾಶವನು ಕಂಡು ಕರಗಿಹೋಗಿದೆ ಹೃದಯ II
15 ಹೆದರುವುವು ಪ್ರಭುವೆಂಬ ನಿನ್ನ ನಾಮಕೆ ಜನಾಂಗಗಳು I ಭಯಪಡುವರು ನಿನ್ನ ಪ್ರತಾಪಕೆ ಭೂರಾಜರುಗಳು II
16 ಏಕೆನೆ ಪುನರುದ್ಧರಿಸುವನು ಸಿಯೋನನು I ಪ್ರತ್ಯಕ್ಷಮಾಡುವನಾತ ತನ್ನ ಮಹಿಮೆಯನು II
17 ತಿರಸ್ಕರಿಸನಾತ ನಿರ್ಗತಿಕರ ಮೊರೆಯನು I ನೆರವೇರಿಸದೆ ಬಿಡನು ಅವರ ಕೋರಿಕೆಯನು II
18 ಮುಂದಣ ಸಂತತಿಗಿದು ಶಾಸನವಾಗಿರಲಿ I ಮುಂದೆ ಹುಟ್ಟುವ ಪ್ರಜೆ ಪ್ರಭುವನು ಹೊಗಳಲಿ II
19 ಭೂಲೋಕವನು ವೀಕ್ಷಿಸಿದನು ಪ್ರಭು ಪರಲೋಕದಿಂದ I ದೃಷ್ಟಿಸಿದನು ತನ್ನ ಉನ್ನತ ಪವಿತ್ರಸ್ಥಾನದಿಂದ II
20 ಆಲಿಸಿದಾತನು ಬಂಧಿತರ ಗೋಳಾಟವನು I ಬಿಡಿಸಿಹನು ಮರಣತೀರ್ಪಿಗೆ ಗುರಿಯಾದವರನು II
21 ಹೀಗೆ ಪ್ರಭುವಿಗಾರಾಧನೆ ಸಲ್ಲಿಸಲು I ಜನಾಂಗಗಳೂ ರಾಜ್ಯಗಳೂ ಕೂಡಿರಲು
22 ಹೊಗಳಲಾಗುವುದು ಪ್ರಭುವಿನ ನಾಮ ಸಿಯೋನಿನಲಿ I ಆತನ ಗುಣಗಾನವಿರುವುದು ಆ ಜೆರುಸಲೇಮಿನಲಿ II
23 ನಡುಹಾದಿಯಲೆ ಕುಂದಿಸಿಹನು ಪ್ರಭು ನನ್ನ ಬಲವನು I ಕಡಿಮೆಮಾಡಿಬಿಟ್ಟಿಹನು ಆತ ನನ್ನ ಆಯುಷ್ಯವನು II
24 ಎಂತಲೆ ನಾನು : “ಅರ್ಧಾಯುಷ್ಯದಲೆ ನನ್ನೊಯ್ಯಬೇಡ ದೇವಾ I ತಲತಲಾಂತರದವರೆಗೂ ನಿನ್ನ ವರುಷಗಳು ಉಳಿದಿವೆಯಲ್ಲಾ II
25 ಆದಿಯಲೆ ನೀ ಭುವಿಗೆ ಅಸ್ತಿವಾರ ಹಾಕಿದೆ I ಗಗನಮಂಡಲವು ಸಹ ನಿನ್ನ ಸೃಷ್ಟಿಯಾಗಿದೆ II
26 ನೀನಾದರೋ ಉಳಿದಿರುವೆ, ಅವೋ ಅಳಿದುಹೋಗುವುವು I ಹಳೆಯದಾಗುತ್ತವೆ ಬಟ್ಟೆಯಂತೆ ಅವೆಲ್ಲವು I ಉಡುಪಿನಂತೆ ಬದಲಿಸುತ್ತ, ಮಾರ್ಪಡುತ್ತವೆ ಅವು II
27 ನೀನಂತೂ ಬದಲಾಗದೆ ಇರುವೆಯಯ್ಯಾ I ನಿನ್ನ ವರುಷಗಳಿಗೆ ಮುಗಿವೇ ಇಲ್ಲವಯ್ಯಾ II
28 ಬಾಳುವರು ನಿನ್ನ ದಾಸರ ಮಕ್ಕಳು ಸುರಕ್ಷಿತವಾಗಿ I ಇರುವುದವರ ಸಂತತಿ ನಿನ್ನ ಸಮ್ಮುಖದಲಿ ಸ್ಥಿರವಾಗಿ II