ಕೀರ್ತನೆಗಳು 101 (Psalms 101)

Kannada Bible — Kannada (ಕನ್ನಡ)

1 ಪ್ರೀತಿನೀತಿಗಳ ಕುರಿತು ಹಾಡುವೆನು I ಹೇ‍ ಪ್ರಭೂ, ನಿನ್ನನೆ ಹಾಡಿಹೊಗಳುವೆನು II

2 ಸನ್ಮಾರ್ಗದಲೇ ನಾ ನಡೆಯುವೆನು I ನನಗೆಂದು ನೀಡುವೆ ದರ್ಶನವನು? I ಮನೆಯೊಳಗೂ ಶುದ್ಧಹೃದಯಿ ನಾನು II

3 ನೀಚಕಾರ್ಯಗಳನು ನಾ ವೀಕ್ಷಿಸಲಾರೆ I ಅಧರ್ಮಿಗಳ ನಡೆಯನು ನಾ ಸಹಿಸಲಾರೆ I ಅಂಥವರ ಸಹವಾಸವನು ನಾ ತಾಳಲಾರೆ II

4 ನನ್ನ ಬಿಟ್ಟು ತೊಲಗಲಿ ಮೂರ್ಖತನ I ನನಗೆ ಹತ್ತದೆಯಿರಲಿ ಕೆಟ್ಟತನ II

5 ಸಂಹರಿಸುವೆನು ನೆರೆಯವನ ಮೇಲೆ ಅಪವಾದ ಹೊರಿಸುವವನನು I ಸಹಿಸಲಾರೆ ಸೊಕ್ಕಿದಕಣ್ಣು, ಕೊಬ್ಬಿದ ಮನ ಉಳ್ಳಂಥವನನು II

6 ಆರಿಸಿಕೊಳ್ವೆನು ನಾಡಿನ ಸಜ್ಜನರನು I ಇರಿಸಿಕೊಳ್ವೆನು ನನ್ನೊಡನೆ ವಾಸಿಸಲವರನು I ಸನ್ಮಾರ್ಗಿಯೆ ನನ್ನ ಸೇವಕನಾಗಿರುವನು II

7 ಮೋಸಗಾರನು ವಾಸಮಾಡನು ನನ್ನ ನಿವಾಸದಲಿ I ಸುಳ್ಳುಗಾರನು ನಿಲ್ಲಲಾರನು ನನ್ನ ಸಮ್ಮುಖದಲಿ II

8 ಇಲ್ಲಮಾಡುವೆನು ಕೆಡುಕರನು ಪ್ರಭುವಿನಾ ನಗರದೊಳಗೆ I ನಾಶಮಾಡುವೆನು ನಾಡಿನ ದುರುಳರನು ದಿನದಿನಗಳೊಳಗೆ II

  • Psalms 100 — previous chapter
  • Psalms 102 — next chapter
  • Psalms 101 — English (KJV)
  • Psalms 101 — English (WEB)
  • Psalms 101 — Tamil (தமிழ்)
  • Psalms 101 — Hindi (हिंदी)
  • Psalms 101 — Malayalam (മലയാളം)