Kannada Bible — Kannada (ಕನ್ನಡ)
1 ಹಿಂದಟ್ಟದಿದ್ದರೂ ದುಷ್ಟನು ಹೆದರಿ ಓಡುವನು; ಸತ್ಯಸಂಧನು ಸಿಂಹದಂತೆ ಧೈರ್ಯದಿಂದಿರುವನು.
2 ಅರಾಜಕತೆಯಿಂದ ನಾಡಿನಲ್ಲಿ ನಾಯಕರನೇಕರು ತಲೆಯೆತ್ತುವರು; ಜ್ಞಾನ ಹಾಗೂ ವಿವೇಕದಿಂದ ನಾಡು ಸುಸ್ಥಿರವಾಗುವುದು.
3 ದಲಿತರನ್ನೇ ಹಿಂಸಿಸುವ ಬಡವ, ಕಾಳೂ ಉಳಿಯದಂತೆ ಜಡಿಯುವ ಮಳೆಗೆ ಸಮಾನ.
4 ಧರ್ಮಶಾಸ್ತ್ರವನ್ನು ಕೈಗೊಳ್ಳದವರು ದುಷ್ಟರನ್ನು ಹೊಗಳುವರು; ಕೈಗೊಳ್ಳುವವರು ಅವರ ವಿರುದ್ಧ ಹೋರಾಡುವರು.
5 ಕೆಟ್ಟವರು ನ್ಯಾಯ ನೀತಿಯನ್ನು ಗ್ರಹಿಸರು; ಸರ್ವೇಶ್ವರನ ಭಕ್ತರು ಅದನ್ನು ಪೂರ್ತಿಯಾಗಿ ಗ್ರಹಿಸುವರು.
6 ದುರ್ಮಾರ್ಗಿಯಾದ ಧನವಂತನಿಗಿಂತ ನಿರ್ದೋಷಿಯಾಗಿ ನಡೆವ ದರಿದ್ರನೇ ಲೇಸು.
7 ಜ್ಞಾನಿಯಾದ ಮಗ ಧರ್ಮಶಾಸ್ತ್ರವನ್ನು ಕೈಗೊಳ್ಳುವನು; ಹೊಟ್ಟೆಬಾಕರ ಗೆಳೆಯ ತಂದೆಗೆ ಅಪಕೀರ್ತಿ ತರುವನು.
8 ಬಡ್ಡಿಬಾಕಿಗಳಿಂದ ಬೆಳೆದ ಆಸ್ತಿ, ಬಡವರಲ್ಲಿ ಕನಿಕರವುಳ್ಳವನಿಗೆ ನಿಧಿ.
9 ಧರ್ಮಶಾಸ್ತ್ರಕ್ಕೆ ಕಿವಿಮುಚ್ಚಿಕೊಳ್ಳುವವನ ಪ್ರಾರ್ಥನೆ, ದೇವರಿಂದ ತಿರಸ್ಕೃತವಾದ ಪ್ರಾರ್ಥನೆ.
10 ನೆಟ್ಟಗೆ ನಡೆವವರನ್ನು ಕೆಟ್ಟದಾರಿಗೆ ಎಳೆಯುವವನು ತಾನು ತೋಡಿದ ಗುಂಡಿಯಲ್ಲಿ ತಾನೇ ಬೀಳುವನು; ನಿರ್ದೋಷಿಗಳು ಸುಖಸಂತೋಷಕ್ಕೆ ಬಾಧ್ಯಸ್ಥರು.
11 ಹಣವಂತ ತಾನೇ ಜ್ಞಾನಿಯೆಂದು ಎಣಿಸಿಕೊಳ್ಳುವನು; ವಿವೇಕಿಯಾದ ಬಡವ ಅವನೆಂಥವನೆಂದು ಅರ್ಥಮಾಡಿಕೊಳ್ಳುವನು.
12 ಸತ್ಯಸಂಧರಿಗೆ ಜಯವಾದರೆ ಸಂಭ್ರಮ ಸಡಗರ; ದುಷ್ಟರನ್ನು ಉನ್ನತಿಗೇರಿಸಿದರೆ ಬೇರೆಯವರು ಮರೆಯಾಗುವರು.
13 ಪಾಪಗಳನ್ನು ಮುಚ್ಚಿಟ್ಟುಕೊಳ್ಳುವವನಿಗೆ ಮುಕ್ತಿ ದೊರಕದು; ಅವುಗಳನ್ನು ಒಪ್ಪಿಕೊಂಡು ಬಿಟ್ಟರೆ ಕರುಣೆ ದೊರಕುವುದು.
14 ಭಯದಿಂದ ನಡೆದುಕೊಳ್ಳುವವನು ಭಾಗ್ಯವಂತನು; ಕಠಿಣ ಹೃದಯನು ಕೇಡಿಗೆ ತುತ್ತಾಗುವನು.
15 ದಲಿತರನ್ನಾಳುವ ದುರುಳರಾಜ ಗರ್ಜಿಸುವ ಸಿಂಹ, ಹುಡುಕಾಡುವ ಕರಡಿ.
16 ವಿವೇಕಶೂನ್ಯನಾದ ಒಡೆಯ ಮಹಾಹಿಂಸಕ; ದುರ್ಲಾಭವನ್ನು ವಿರೋಧಿಸುವವನಿಗೆ ದೀರ್ಘಾಯುಷ್ಯ.
17 ನರಹತ್ಯಮಾಡಿದ ಪಾಪಾತ್ಮನು ಪಾತಾಳದತ್ತ ಓಡೋಡುತ್ತಿರುವನು; ಅವನನ್ನು ಯಾರೂ ತಡೆಯಬಾರದು.
18 ಸನ್ಮಾರ್ಗಿಗಳಿಗೆ ಸಂರಕ್ಷಣೆ, ದುರ್ಮಾರ್ಗಿಗಳಿಗೆ ಪತನ ತಟ್ಟನೆ.
19 ದುಡಿದು ಹೊಲ ಗೇಯುವವನಿಗೆ ಹೊಟ್ಟೆ ತುಂಬ ಅನ್ನ; ವ್ಯರ್ಥಕಾರ್ಯಗಳಲ್ಲಿ ಆಸಕ್ತನಾದವನಿಗೆ ಬೇಕಾದಷ್ಟು ಬಡತನ.
20 ಪ್ರಾಮಾಣಿಕನಿಗೆ ಪೂರ್ಣಾಶೀರ್ವಾದ; ಹಣವಂತನಾಗಲು ಹಾತೊರೆಯುವವನು ಶಿಕ್ಷಾರ್ಹ.
21 ಪಕ್ಷಪಾತ ತಕ್ಕುದಲ್ಲ; ತುತ್ತನ್ನಕ್ಕಾಗಿ ತಪ್ಪುಮಾಡುವವರುಂಟು.
22 ಆಸ್ತಿ ಗಳಿಸಲು ಲೋಭಿಗೆ ಆತುರ; ತನಗೆ ಕೊರತೆ ಕಾದಿದೆಯೆಂದು ಆತ ಅರಿಯ.
23 ಮುಖಸ್ತುತಿ ಮಾಡುವವನಿಗಿಂತ ಗದರಿಸುವವನೇ ಕೊನೆಗೆ ಹೆಚ್ಚು ದಯಾವಂತ.
24 “ಅದು ತಪ್ಪಲ್ಲ” ಎಂದು ಹೆತ್ತವರ ಆಸ್ತಿಯನ್ನು ಕದಿಯುವವನು ಕೊಳ್ಳೆ ಹೊಡೆಯುವವರ ಸಂಗಡಿಗನು.
25 ಅತ್ಯಾಸೆಪಡುವವನು ಜಗಳವೆಬ್ಬಿಸುವನು; ಸರ್ವೇಶ್ವರನಲ್ಲಿ ಭರವಸೆಯಿಟ್ಟವನು ಬಲಿಷ್ಠನು.
26 ತನ್ನ ಶಕ್ತಿಯಲ್ಲೆ ಭರವಸೆ ಇಡುವವನು ಮೂಢನು; ಜ್ಞಾನಿಗಳ ಮಾರ್ಗದಲ್ಲಿ ನಡೆವವನು ವಿಮುಕ್ತನಾಗುವನು.
27 ಬಡವರಿಗೆ ಕೊಡುವವನು ಕೊರತೆಪಡನು; ಅವರನ್ನು ಕಂಡೂ ಕಾಣದಂತೆ ಇರುವವನು ಬಹುಶಾಪಗ್ರಸ್ಥನು.
28 ದುಷ್ಟರು ಪ್ರಬಲವಾದರೆ ಜನರು ತಲೆಮರೆಸಿಕೊಳ್ಳುವರು; ದುಷ್ಟರು ನಾಶವಾದರೆ ಶಿಷ್ಟರು ವೃದ್ಧಿಯಾಗುವರು.