ಜ್ಞಾನೋಕ್ತಿಗಳು 27 (Proverbs 27)

Kannada Bible — Kannada (ಕನ್ನಡ)

1 ನಾಳೆ ಕುರಿತು ಕೊಚ್ಚಿಕೊಳ್ಳಬೇಡ; ಇಂದು ಒದಗಲಿರುವುದೇ ನಿನಗೆ ತಿಳಿದಿಲ್ಲ.

2 ನಿನ್ನ ಬಾಯಿ ಅಲ್ಲ, ಬೇರೆಯವರು ಹೊಗಳಲಿ ನಿನ್ನ; ಆತ್ಮಸ್ತುತಿ ಸಲ್ಲ, ಅನ್ಯರು ಸ್ತುತಿಸಲಿ ನಿನ್ನ.

3 ಕಲ್ಲು ಭಾರ, ಮರಳು ಭಾರ, ಮೂಢನ ರೇಗಾಟ ಇವೆರಡಕ್ಕೂ ಬಲುಭಾರ.

4 ಕೋಪವು ಕ್ರೂರ, ಕ್ರೋಧವು ಪ್ರವಾಹ, ಮತ್ಸರದ ಮುಂದೆ ನಿಲ್ಲಬಲ್ಲವರಾರು?

5 ಮರೆಯಾದ ಪ್ರೀತಿಗಿಂತ ಬಹಿರಂಗವಾದ ಗದರಿಕೆ ಲೇಸು.

6 ಮಿತ್ರನು ಕೊಡುವ ಗುದ್ದು ಹಿತಕರ; ಶತ್ರುವು ಕೊಡುವ ಮುದ್ದು ಮೋಸಕರ.

7 ಹೊಟ್ಟೆ ತುಂಬಿದವನಿಗೆ ಜೇನುಕೊಟ್ಟರೂ ಕಹಿ; ಹೊಟ್ಟೆ ಹಸಿದವನಿಗೆ ಏನು ಕೊಟ್ಟರು ಸಿಹಿ.

8 ಮನೆಬಿಟ್ಟು ಅಲೆಯುವ ವ್ಯಕ್ತಿ, ಗೂಡುಬಿಟ್ಟು ಅಲೆಯುವ ಹಕ್ಕಿ.

9 ತೈಲ, ಸುಗಂಧ ದ್ರವ್ಯಗಳು ಮನೋಹರ, ಮಿತ್ರನ ಆದರಣೆ, ಸಲಹೆ ಅತಿ ಮಧುರ.

10 ನಿನಗೂ ನಿನ್ನ ಹೆತ್ತವನಿಗೂ ಮಿತ್ರನಾದವನನ್ನು ಬಿಡಬೇಡ; ಇಕ್ಕಟ್ಟಿನ ದಿನದಲ್ಲಿ ಒಡಹುಟ್ಟಿದವರನ್ನು ಆಶ್ರಯಿಸಬೇಡ; ದೂರವಿರುವ ಅಣ್ಣನಿಗಿಂತ ಹತ್ತಿರವಿರುವ ನೆರೆಯವನೆ ಲೇಸು.

11 ಮಗನೇ, ಜ್ಞಾನಗಳಿಸಿ ನನ್ನ ಮನಸ್ಸನ್ನು ಸಂತೋಷಪಡಿಸು; ಆಗ ನನ್ನ ನಿಂದಕರಿಗೆ ಸರಿಯಾದ ಉತ್ತರ ಸಿಕ್ಕುವುದು.

12 ಜಾಣ ಕೇಡನ್ನು ಕಂಡು ಅಡಗಿಕೊಳ್ಳುತ್ತಾನೆ; ಕೋಣ ಮುನ್ನುಗ್ಗಿ ಹಾನಿಗೆ ಈಡಾಗುತ್ತಾನೆ.

13 ಅಪರಿಚಿತನಿಗೆ ಹೊಣೆಯಾದವನ ಬಟ್ಟೆ ಕಿತ್ತುಕೊ; ಅಪರಿಚಿತಳಿಗೆ ಹೊಣೆ ನಿಲ್ಲುವವನನ್ನೆ ಒತ್ತೆ ಇಟ್ಟುಕೊ.

14 ಮುಂಜಾನೆಯೆ ಅಬ್ಬರದಿಂದ ನೆರೆಯವನನ್ನು ಎಬ್ಬಿಸಿ ಮಾಡುವ ಆಶೀರ್ವಾದ, ಶಾಪವೆಂದೇ ಪರಿಗಣಿಸಲ್ಪಡುವುದು.

15 ತಂಟೆ ಮಾಡುವ ಹೆಂಡತಿ ತಟತಟನೆ ತೊಟ್ಟಿಕ್ಕುವ ಹನಿ.

16 ಅಂಥವಳನ್ನು ಅಡಗಿಸಬಲ್ಲವನು ಗಾಳಿಯನ್ನು ಅಡಗಿಸಬಲ್ಲ, ಕೈ ಎಣ್ಣೆಜಿಡ್ಡನ್ನೂ ಬಿಗಿಹಿಡಿಯಬಲ್ಲ.

17 ಕಬ್ಬಿಣ ಕಬ್ಬಿಣವನ್ನು ಹರಿತ ಮಾಡುವಂತೆ ಮಿತ್ರನು ಮಿತ್ರನ ಬುದ್ಧಿಯನ್ನು ಹರಿತಮಾಡಬಲ್ಲ.

18 ಅಂಜೂರವನ್ನು ಕಾಯುವವನು ಅದರ ಹಣ್ಣನ್ನು ತಿನ್ನುವನು; ಯಜಮಾನನನ್ನು ಕಾಯುವವನು ಸನ್ಮಾನವನ್ನು ಸವಿಯುವನು.

19 ನೀರು ಮುಖಕ್ಕೆ ಮುಖವನ್ನು ಪ್ರತಿಬಿಂಬಿಸುತ್ತದೆ; ಹೃದಯ ಮನುಷ್ಯನಿಗೆ ಮನುಷ್ಯನನ್ನು ತೋರ್ಪಡಿಸುತ್ತದೆ.

20 ನರಕ ಪಾತಾಳಗಳಿಗೆ ತೃಪ್ತಿಯೇ ಇಲ್ಲ; ಮನುಷ್ಯನ ಕಣ್ಣುಗಳಿಗೂ ತೃಪ್ತಿಯಿಲ್ಲ.

21 ಬೆಳ್ಳಿಬಂಗಾರಗಳಿಗೆ ಪುಟಕುಲುಮೆಗಳಿಂದ ಶೋಧನೆ; ಮನುಷ್ಯನಿಗೆ ತನ್ನ ಸ್ತುತಿಕೀರ್ತಿಯಿಂದ ಪರಿಶೋಧನೆ.

22 ಮೂರ್ಖನನ್ನು ಕಾಳಿನ ಸಂಗಡ ಒರಳಿಗೆ ಹಾಕಿ ಒನಕೆಯಿಂದ ಕುಟ್ಟಿದರೂ ಮೂರ್ಖತನ ತೊಲಗದು.

23 ನಿನ್ನ ಹಿಂಡುಗಳ ಪರಿಸ್ಥಿತಿಯನ್ನು ತಿಳಿದುಕೊ; ನಿನ್ನ ಮಂದೆಗಳನ್ನು ಚೆನ್ನಾಗಿ ನೋಡಿಕೊ.

24 ಸಿರಿಸಂಪತ್ತು ಶಾಶ್ವತವಲ್ಲ; ಕಿರೀಟ ತಲತಲಾಂತರಕ್ಕೂ ಇರುವುದಿಲ್ಲ.

25 ಹುಲ್ಲು ಕೊಯ್ದು ತಂದಮೇಲೆ, ಗುಡ್ಡದ ಸೊಪ್ಪು ಕೂಡಿಸಿಟ್ಟ ಮೇಲೆ, ಹಸಿ ಹುಲ್ಲು ಚಿಗುರುತ್ತದೆ.

26 ಕುರಿಗಳಿಂದ ನಿನ್ನ ಬಟ್ಟೆಬರೆ; ಆಡುಗಳಿಂದ ನಿನ್ನ ಹೊಲಗದ್ದೆ.

27 ನಿನ್ನ, ನಿನ್ನ ಮನೆಯವರ ಊಟ ತಿಂಡಿಗೆ, ನಿನ್ನ ದಾಸಿಯರ ಜೀವನಕ್ಕೆ ಮೇಕೆಗಳ ಹಾಲೇ ಸಾಕು.

  • Proverbs 26 — previous chapter
  • Proverbs 28 — next chapter
  • Proverbs 27 — English (KJV)
  • Proverbs 27 — English (WEB)
  • Proverbs 27 — Tamil (தமிழ்)
  • Proverbs 27 — Hindi (हिंदी)
  • Proverbs 27 — Malayalam (മലയാളം)