ಕೀರ್ತನೆಗಳು 99 (Psalms 99)

Kannada Bible — Kannada (ಕನ್ನಡ)

1 ವಹಿಸಿಹನು ಪ್ರಭು ರಾಜ್ಯಾಧಿಕಾರವನು : ನಡುಗುತಿಹುದು ಜನಾಂಗವು I ಕೆರೂಬಿಯರ ಮಧ್ಯೆ ಆಸೀನನಾಗಿಹನು : ಕಂಪಿಸುತಿಹುದು ಜಗವು II

2 ಸಿಯೋನಿನಲಿ ಪ್ರಭು ಶ್ರೇಷ್ಠನು I ರಾಷ್ಟ್ರಗಳಲ್ಲೆಲ್ಲಾ ಉತ್ಕೃಷ್ಠನು II

3 ಆತ ಪರಮ ಪವಿತ್ರನು, ಸ್ತುತಿಸಲಿ ಅವರೆಲ್ಲರು I ಆತ ಘನಗಂಭೀರನು, ಸ್ತುತಿಸಲಿ ಆತನ ಶ್ರೀನಾಮವನು II

4 ಶಕ್ತಿಸ್ವರೂಪಿಯೇ, ನ್ಯಾಯಪ್ರಿಯ ರಾಜನೇ I ನ್ಯಾಯನೀತಿ, ಯಥಾರ್ಥತೆಗೆ ಸ್ಥಾಪಕ ನೀನೆ I ಇಸ್ರಯೇಲ ವಂಶಕ್ಕಿದನು ಮನದಟ್ಟಾಗಿಸಿದವ ನೀನೆ II

5 ಪರಮ ಪಾವನನು ನಮ್ಮೀ ಸ್ವಾಮಿ ದೇವನು I ಹೊಗಳಿರಿ, ಆತನ ಪಾದಪೀಠಕೆ ಅಡ್ಡಬೀಳಿರಿ ನೀವೆಲ್ಲರು II

6 ಪ್ರಭುವಿನ ಯಾಜಕರು, ಮೋಶೆ ಮತ್ತು ಆರೋನನು I ಸಮುವೇಲನು ಸಹ ಆತನ ಶರಣರಲಿ ಒಬ್ಬನು I ಪ್ರಾರ್ಥಿಸಲು ಇವರು, ಪ್ರಭುವು ಸದುತ್ತರಿಸಿದನು II

7 ಮೇಘಸ್ತಂಭದಲಿದ್ದು ಅವರೊಡನೆ ಮಾತಾಡಿದನು I ಕೈಗೊಂಡರು ಅವರು ಆತನಿತ್ತ ವಿಧಿನಿಯಮಗಳನು II

8 ಸ್ವಾಮಿ ದೇವಾ, ನೀನವರಿಗೆ ಸದುತ್ತರ ಪಾಲಿಸಿದೆ I ತಪ್ಪನು ದಂಡಿಸಿದೆಯಾದರೂ ಕ್ಷಮಿಸುವ ದೇವನಾಗಿದ್ದೆ II

9 ಘನಪಡಿಸಿರೆಮ್ಮ ಸ್ವಾಮಿ ದೇವನನು I ಶ್ರೀಪರ್ವತದಲಿ ವಂದಿಸಿ ಆತನನು I ಪರಮಪವಿತ್ರನು ಆ ನಮ್ಮ ದೇವನು II

  • Psalms 98 — previous chapter
  • Psalms 100 — next chapter
  • Psalms 99 — English (KJV)
  • Psalms 99 — English (WEB)
  • Psalms 99 — Tamil (தமிழ்)
  • Psalms 99 — Hindi (हिंदी)
  • Psalms 99 — Malayalam (മലയാളം)