ಕೀರ್ತನೆಗಳು 97 (Psalms 97)

Kannada Bible — Kannada (ಕನ್ನಡ)

1 ಇದೆ ಪ್ರಭುವಿನ ಕೈಯಲಿ ರಾಜ್ಯಾಧಿಕಾರ I ಉಲ್ಲಾಸಿಸಲಿ ಧರಣಿಮಂಡಲದಾದ್ಯಂತ I ಸಂತೋಷಿಸಲಿ ಕಡಲಿನ ದ್ವೀಪಗಳೆಲ್ಲ II

2 ಇವೇ ಮುಗಿಲೂ ಕಾರ್ಮುಗಿಲೂ ಆತನ ಸುತ್ತಲು I ನ್ಯಾಯ-ನೀತಿ ಆತನ ಗದ್ದುಗೆಯಸ್ತಿವಾರಗಳು II

3 ಚಲಿಸುತ್ತಿದೆ ಬೆಂಕಿ ಆತನ ಮುಂದುಗಡೆ I ಸುಡುತ್ತದೆ ಆತನ ವೈರಿಗಳನು ಎಲ್ಲೆಡೆ II

4 ಇಳೆಯನು ಬೆಳಗಿಸುತ್ತದೆ ಆತನ ಮಿಂಚು I ನಡುಗುತ್ತದೆ ಭೂಮಿ ಅದಕೆ ಬೆಚ್ಚುಬಿದ್ದು II

5 ಸಾರ್ವಭೌಮನಾದ ಪ್ರಭುವಿನ ಮುಂದೆ I ಕರಗುತ್ತವೆ ಬೆಟ್ಟಗುಡ್ಡಗಳು ಮೇಣದಂತೆ II

6 ಘೋಷಿಸುತ್ತದೆ ಗಗನಮಂಡಲ ಆತನ ನೀತಿಯನು I ಕಾಣುತ್ತವೆ ಸಕಲ ಜನಾಂಗ ಆತನ ಮಹಿಮೆಯನು II

7 ನಾಚಲಿ ವ್ಯರ್ಥವಿಗ್ರಹಗಳನು ಪೂಜಿಸಿ ಹಿಗ್ಗುವವರು I ಪ್ರಭುವಿಗೆ ಅಡ್ಡಬೀಳಲಿ ಆ ದೇವರುಗಳೆಲ್ಲರು II

8 ಪ್ರಭು, ನಿನ್ನ ನ್ಯಾಯತೀರ್ಪನು ಕುರಿತು I ಸಿಯೋನ್ ನಗರವು ಆನಂದಪಟ್ಟಿತು I ಜುದೇಯ ಪ್ರಾಂತ್ಯವು ಹರ್ಷಗೊಂಡಿತು II

9 ಸರ್ವಾಧಿಕಾರಿ ನೀನು ಲೋಕಕ್ಕೆಲ್ಲಾ I ಮಹೋನ್ನತನು ನೀನು ದೇವರುಗಳಿಗೆಲ್ಲಾ II

10 ಕೇಡನು ಹಗೆಮಾಡುವವನಿಗೆ ಪ್ರಭು ಒಲಿವನು I ತನ್ನ ಭಕ್ತರ ಪ್ರಾಣವನು ಕಾಪಾಡುವನು I ದುಷ್ಟರ ಕೈಯಿಂದವರನು ಬಿಡಿಸುವನು II

11 ಉದಯವಾಗುವುದು ಜ್ಯೋತಿ ಸಜ್ಜನರಿಗೆ I ಆನಂದವಿದೆ ಯಥಾರ್ಥ ಹೃದಯಿಗಳಿಗೆ II

12 ಸಜ್ಜನರೇ, ಪ್ರಭುವಿನಲಿ ಆನಂದಿಸಿರಿ I ಆತನ ಶ್ರೀನಾಮವನು ಕೊಂಡಾಡಿರಿ II

  • Psalms 96 — previous chapter
  • Psalms 98 — next chapter
  • Psalms 97 — English (KJV)
  • Psalms 97 — English (WEB)
  • Psalms 97 — Tamil (தமிழ்)
  • Psalms 97 — Hindi (हिंदी)
  • Psalms 97 — Malayalam (മലയാളം)