ಕೀರ್ತನೆಗಳು 92 (Psalms 92)

Kannada Bible — Kannada (ಕನ್ನಡ)

1 ಹೇ ಪ್ರಭೂ, ನಿನ್ನ ಗುಣಗಾನ ಮಂಗಳಕರ I ಪರಾತ್ಪರನೆ, ನಿನ್ನ ನಾಮಭಜನೆ ಹಿತಕರ II

2 ಪ್ರಾತಃಕಾಲದಲೆ ನಿನ್ನ ಪ್ರೀತಿಯನು I ರಾತ್ರಿಕಾಲದಲೆ ನಿನ್ನ ಸತ್ಯತೆಯನು II

3 ವರ್ಣಿಸುವುದುಚಿತ ವೀಣಾ ಸ್ವರಮಂಡಲದಿಂದ I ಕೊಳಲ ದನಿಯಿಂದ, ಕಿನ್ನರಿಯ ನಾದಸ್ವರದಿಂದ II

4 ನಿನ್ನ ಕಾರ್ಯಗಳಿಂದ ಪ್ರಭು, ನನ್ನನ್ನು ಆನಂದಗೊಳಿಸಿರುವೆ I ನಿನ್ನಾ ಕಾರ್ಯಗಳ ನೋಡಿ, ನಾನು ಉಲ್ಲಾಸದಿಂದ ಹಾಡುವೆ II

5 ಪ್ರಭು, ನಿನ್ನ ಕೃತ್ಯಗಳೆನಿತೋ ಅಮೂಲ್ಯ I ನಿನ್ನಾಲೋಚನೆಗಳು ಎನಿತೋ ಅಶೋಧ್ಯ II

6 ಇದನರಿಯನು ಪಶುಪ್ರಾಯನು I ಇದ ತಿಳಿಯನು ಬುದ್ಧಿಹೀನನು II

7 ದುರುಳರು ಚಿಗುರಬಹುದು ಹುಲ್ಲಿನಂತೆ I ಕೆಡುಕರು ಅರಳಬಹುದು ಹೂವಿನಂತೆ I ಅವರ ಅಳಿವಂತೂ ಕಟ್ಟಿಟ್ಟ ಬುತ್ತಿಯಂತೆ II

8 ನೀನಾದರೊ ಪ್ರಭು, ಸರ್ವದಾ ಇರುವೆ I ಮಹೋನ್ನತದೊಳು ವಿರಾಜಿಸುತ್ತಿರುವೆ II

9 ಕಾಡುಕೋಣದ ಕೊಂಬಿನ ಬಲವನು ನನಗಿತ್ತಿರುವೆ I ಚೈತನ್ಯದ ತೈಲದಿಂದ ನನ್ನನು ಅಭ್ಯಂಜಿಸಿರುವೆ II

10 ನಿನ್ನ ಶತ್ರುಗಳ ವಿನಾಶ ನಿಶ್ಚಿತ I ಕೆಡುಕರೆಲ್ಲ ಚದರಿ ಪೋಪುದು ಖಚಿತ II

11 ನಾ ಕಣ್ಣಾರೆ ಕಂಡಿರುವೆ ಶತ್ರುಗಳಿಗಾದ ದುರ್ಗತಿಯನು I ಕಿವಿಯಾರೆ ಕೇಳಿರುವೆ ನನ್ನ ವಿರೋಧಿಗಳಿಗಾದ ವಿಪತ್ತನು II

12 ಬೆಳೆಯುವರು ಸಜ್ಜನರು ಖರ್ಜೂರದ ವೃಕ್ಷದಂತೆ I ವೃದ್ಧಿಯಾಗುವರು ಲೆಬನೋನಿನ ದೇವದಾರಿನಂತೆ II

13 ಅವರಿರುವರು ಪ್ರಭುವಿನಾಲಯದಲೆ ನೆಟ್ಟ ಸಸಿಗಳಂತೆ I ನಮ್ಮ ದೇವಾಂಗಳದಿ ಹುಲುಸಾಗಿ ಬೆಳೆವ ಮರಗಳಂತೆ I ಫಲಿಸುವರು ಮುಪ್ಪಿನಲೂ, ಶೋಭಿಸುವರು ಪಚ್ಚೆಪಸಿರಂತೆ II

15 ಈ ಪರಿ ಪಡೆವುದು ಸಾಕ್ಷ್ಯ ಪ್ರಭುವಿನಾ ಸತ್ಯಸಂಧತೆ I ಆತನೇ ನನಗೆ ಪೊರೆಬಂಡೆ, ಆತನಲ್ಲಿಲ್ಲ ವಕ್ರತೆ II

  • Psalms 91 — previous chapter
  • Psalms 93 — next chapter
  • Psalms 92 — English (KJV)
  • Psalms 92 — English (WEB)
  • Psalms 92 — Tamil (தமிழ்)
  • Psalms 92 — Hindi (हिंदी)
  • Psalms 92 — Malayalam (മലയാളം)