ಕೀರ್ತನೆಗಳು 76 (Psalms 76)

Kannada Bible — Kannada (ಕನ್ನಡ)

1 ಸುಪ್ರಸಿದ್ಧನು ದೇವನು ಜುದೇಯನಾಡಿನಲಿ I ಸುಪ್ರಖ್ಯಾತ ಆತನ ನಾಮ ಇಸ್ರಯೇಲಿನಲಿ II

2 ಆತನ ಬಿಡಾರ ಸಾಲೇಮಿನಲಿ I ಆತನ ನಿವಾಸ ಸಿಯೋನಿನಲಿ II

3 ಚೂರು ಚೂರು ಮಾಡಿಹನಲ್ಲಿ ಥಳಥಳಿಸುವ ಬಾಣಗಳನು I ಖಡ್ಗ, ಗುರಾಣಿ ಎಂಬೆಲ್ಲ ಯುದ್ಧಾಯುಧಗಳನು II

4 ಹೇ ದೇವಾ, ನೀ ತೇಜೋಮಯನು I ಸ್ಥಿರಗಿರಿಗಳಿಗಿಂತ ಗಂಭೀರನು II

5 ಕೆಚ್ಚೆದೆಯ ವೀರರು ಸುಲಿಗೆಯಾಗಿ ಚಿರನಿದ್ರೆಯಲಿಹರು I ಕೈಕತ್ತರಿಸಿದಂತಿರುವರು ಆ ರಣಧೀರರೆಲ್ಲರು II

6 ನಿನ್ನ ಒಂದು ಗದರಿಕೆಗೆ, ಯಕೋಬನ ದೇವನೆ I ರಥಾಶ್ವಬಲಗಳೆಲ್ಲಾ ಬಿದ್ದಿವೆ ಬಿಮ್ಮನೆ II

7 ನೀನಾದರೋ ದೇವಾ, ಮಹಾಭಯಂಕರನು I ಸಿಟ್ಟೇರಿದ ನಿನ್ನ ಮುಂದೆ ಯಾವನು ನಿಂತಾನು? II

8 ನಿನ್ನ ನಿರ್ಣಯ ಸಗ್ಗದಿಂದ ಕೇಳಿಸಿದಾಗ I ಭಯಭೀತಿಯಿಂದ ತೆಪ್ಪಗಾಯ್ತು ಸಮಸ್ತ ಜಗ II

9 ನ್ಯಾಯಸ್ಥಾಪನೆಗೆ ದೇವನೆದ್ದು ನಿಂತಾಗ I ಧರೆಯ ದೀನರನುದ್ಧರಿಸಲು ಅನುವಾದಾಗ I ಭಯಭೀತಿಯಿಂದ ತೆಪ್ಪಗಾಯ್ತು ಸಮಸ್ತ ಜಗ II

10 ನರರ ಕೋಪ, ದೇವಾ ನಿನ್ನ ಘನತೆಗೆ ಸಾಧಕ I ಅಳಿದುಳಿದಾ ಕೋಪ ನಿನ್ನ ನಡುಕಟ್ಟಿಗೆ ಲಾಯಕ II

11 ನಿಮ್ಮ ದೇವನಾದ ಸ್ವಾಮಿಗೆ ಸಲ್ಲಿಸಿರಿ ಹೊತ್ತ ಹರಕೆ I ಸುತ್ತಣರೆಲ್ಲರು ಸಮರ್ಪಿಸಲಿ ಭಯಂಕರನಿಗೆ ಕಾಣಿಕೆ II

12 ಅರಸರ ದರ್ಪವನಡಗಿಸಿಬಿಡುವನು I ಭೂಪತಿಗಳಿಗೋ ಕಂಪನ ಕೊಡುವನು II

  • Psalms 75 — previous chapter
  • Psalms 77 — next chapter
  • Psalms 76 — English (KJV)
  • Psalms 76 — English (WEB)
  • Psalms 76 — Tamil (தமிழ்)
  • Psalms 76 — Hindi (हिंदी)
  • Psalms 76 — Malayalam (മലയാളം)