ಕೀರ್ತನೆಗಳು 49 (Psalms 49)

Kannada Bible — Kannada (ಕನ್ನಡ)

1 ಸರ್ವಜನಾಂಗಗಳೆ, ಗಮನಿಸಿರಿ I ಭೂನಿವಾಸಿಗಳೆ, ನನಗೆ ಕಿವಿಗೊಡಿ II

2 ಜನಸಾಮಾನ್ಯರೆ, ಜನಾಧಿಪತಿಗಳೆ, ದರಿದ್ರರೆ, ಧನವಂತರೆ I ನೀವೆಲ್ಲರು ನನ್ನ ಮಾತುಗಳಿಗೆ ಕಿವಿಗೊಟ್ಟು ಆಲಿಸಿರೈ II

3 ನನ್ನ ಬಾಯಿ ಬೋಧಿಸುವುದು ಸುಜ್ಞಾನವನು I ನನ್ನ ಮನ ಧ್ಯಾನಿಸುವುದು ವಿವೇಚನೆಯನು II

4 ನಾ ಕಿವಿಗೊಟ್ಟು ಆಲಿಸುವೆನು ಧರ್ಮದ ಗಾದೆಯನು I ವೀಣೆ ನುಡಿಸುತ ವಿವರಿಸುವೆನು ಅದರ ಗೂಡಾರ್ಥವನು II

5 ಆಪತ್ಕಾಲದಲಿ ನಾನೇಕೆ ಭಯಪಡಬೇಕು? I ದ್ವೇಷಿಗಳ ದಾಳಿಗೆ ನಾನೇಕೆ ಹೆದರಬೇಕು? II

6 ಅವರ ಭರವಸೆ ಸಿರಿಸಂಪತ್ತಿನಲಿ I ಅವರ ಹಿರಿಮೆ ಅಧಿಕಾಸ್ತಿಪಾಸ್ತಿಯಲಿ II

7 ತನ್ನನು ತಾನೇ ಮುಕ್ತಗೊಳಿಸಿಕೊಳ್ಳುವ ಜೀವಾತ್ಮನಿಲ್ಲ I ದೇವರಿಗೆ ಈಡುಕೊಟ್ಟು ಪ್ರಾಣ ಉಳಿಸಿಕೊಳ್ಳಬಲ್ಲ ನರನಿಲ್ಲ II

8 ಪ್ರಾಣಕೆ ತೆರಬೇಕಾದ ಈಡು ಅಮೂಲ್ಯ I ಅದಕೆ ಸಾಕಷ್ಟು ತೆರಲು ಯಾರಿಗೂ ಅಸಾಧ್ಯ II

9 ಸಮಾಧಿಗಿಳಿಯದೆ ಸದಾ ಬಾಳುವ ಬಯಕೆ I ಮಾನವ ಶಕ್ತಿಗೆ ಮೀರಿದುದು ಆ ಗಳಿಕೆ II

10 ಬುದ್ಧಿಜೀವಿಗಳೂ ಸಾಯುವುದು ಖಂಡಿತ I ಮೂರ್ಖ, ಮಂದಗತಿಗಳ ಅಳಿವೂ ನಿಶ್ಚಿತ I ಅವರ ಸೊತ್ತು ಪರರ ಪಾಲು, ಇದೂ ಖಚಿತ II

11 ತಮ್ಮ ಹೆಸರಲೆಸ್ಟೋ ಸೊತ್ತಿದ್ದರೂ I ಸಮಾಧಿಯೇ ಅವರಿಗೆ ಶಾಶ್ವತ ಮಂದಿರವು I ಅದುವದುವೇ ಅವರಿಗೆ ನಿತ್ಯ ನಿವಾಸವು II

12 ನೆಲೆಯಾಗಿರನು ನರನು ಪಟ್ಟಪದವಿಯಲಿ I ನಾಶವಾಗುವನು ಪಶುಪ್ರಾಣಿಗಳ ಪರಿ II

13 ಮೂಢನಂಬಿಕೆಯುಳ್ಳವರ ಗತಿ ಇದುವೇ I ಆ ಮೂಢರ ನಂಬಿ ನಡೆದವರಿಗು ಹಾಗೆಯೇ II

14 ದೂಡುವನು ಅವರನು ಕುರಿಹಿಂಡಿನಂತೆ ಪಾತಾಳಕೆ I ಮರಣವೇ ಕುರಿಗಾಹಿ ಆ ನಿಧನ ನಿವಾಸಿಗಳಿಗೆ I ವಿನಾಶಗೊಳ್ವುದು ಆ ತಳದಲ್ಲಿ ಅವರ ರೂಪರೇಖೆ I ಆಳುವರು ಸಜ್ಜನರು ಅವರೆಲ್ಲರನು ಉದಯಕಾಲಕೆ II

15 ನನ್ನನ್ನಾದರೊ ಸ್ವಾಗತಿಸುವನು ದೇವನು I ಪಾತಾಳದ ಹಿಡಿತದಿಂದ ಬಿಡಿಸುವನು II

16 ಒಬ್ಬನು ಧನಿಕನಾದಾಗ ನೀ ಕಳವಳಗೊಳ್ಳಬೇಡ I ಅವನ ಮನೆಯ ಸೊಬಗನು ಕಂಡು ನಿರಾಶೆಗೊಳ್ಳಬೇಡ II

17 ಸಾಯುವಾಗ ಏನನೂ ಕೊಂಡು ಹೋಗುವುದಿಲ್ಲ I ಘನತೆ ಅವನ ಬೆನ್ನು ಹತ್ತಿ ಹೋಗುವಂತಿಲ್ಲ II

18 ಸಿರಿಬಂದಾಗ ಕೊರತೆಯಿರದು ಹೊಗಳಿಕೆಗೆ I ಆತ್ಮಸ್ತುತಿ, ಮುಖಸ್ತುತಿ, ಇವುಗಳ ಮೆರೆತಕೆ II

19 ಸೇರದಿರನಾತ ಪಿತೃಗಳಧೋಗತಿಯನು I ಅವಿವೇಕಿ ಕಾಣನು ಎಂದಿಗೂ ಪರಂಜ್ಯೋತಿಯನು II

20 ನೆಲೆಯಾಗಿರನು ಪಟ್ಟಪದವಿಯಲಿ I ನಾಶವಾಗುವನು ಪಶುಪ್ರಾಣಿಗಳ ಪರಿ II

  • Psalms 48 — previous chapter
  • Psalms 50 — next chapter
  • Psalms 49 — English (KJV)
  • Psalms 49 — English (WEB)
  • Psalms 49 — Tamil (தமிழ்)
  • Psalms 49 — Hindi (हिंदी)
  • Psalms 49 — Malayalam (മലയാളം)