ಕೀರ್ತನೆಗಳು 36 (Psalms 36)

Kannada Bible — Kannada (ಕನ್ನಡ)

1 ಜಿನುಗುಟ್ಟುತಿಹುದು ಪಾಪವು ದುಷ್ಟನ ಮನದಲಿ I ದೇವ ಭಯವೇ ಇಲ್ಲ ಅವನ ಕಣ್ಣೆದುರಿನಲಿ II

2 “ಬೈಲಿಗೆ ಬಾರದು ನಿನ್ನ ದೋಷವು, ನಿನಗದು ಕೇಡು ತರದು” I ಇಂತುಲಿದು ಆ ಪಾಪದ ಜಿನುಗು ಅವನನು ವಂಚಿಸುತಿಹುದು II

3 ಅವನ ಕೀಳು ಬಾಯಿಯ ತುಂಬ ಕೇಡು ಕಪಟ I ಸನ್ಮತಿ ಸತ್ಕಾರ್ಯಗಳನ್ನು ಬಿಟ್ಟೇಬಿಟ್ಟ II

4 ಆಲೋಚಿಸುತ್ತಿಹನು ಅಕ್ರಮವನು ಹಾಸಿಗೆಯಿಂದಲೆ I ಹೇಸನು ದುಷ್ಕೃತ್ಯಕ್ಕೆ, ಮುನ್ನುಗ್ಗುವನು ದುರ್ಮಾರ್ಗದಲೆ II

5 ನಿನ್ನ ಪ್ರೀತಿ ಪ್ರಭು, ಚುಂಬಿಸುತಿಹುದು ಗಗನವನು I ನಿನ್ನ ಸತ್ಯವು ಮುಟ್ಟುತಿಹುದು ಮೇಘಮಂಡಲವನು II

6 ನಿನ್ನ ನೀತಿ ಸುರಗಿರಿಯಂತೆ, ನಿನ್ನ ನ್ಯಾಯ ಮಹಾಸಾಗರದಂತೆ I ಮಾನವರನು, ಪಶುಪ್ರಾಣಿಗಳನು ಪ್ರಭು, ಸಲಹುವೆ ರಕ್ಷಕನಂತೆ II

7 ನಿನ್ನಚಲ ಪ್ರೀತಿ, ಹೇ ದೇವಾ, ಎಷ್ಟೋ ಅಮೂಲ್ಯ I ನಿನ್ನಕ್ಕರೆಯ ರೆಕ್ಕೆಗಳಡಿ ನರಮಾನವರಿಗಾಶ್ರಯ II

8 ಅವರ ತೃಪ್ತಿ ನಿನ್ನ ಮಂದಿರದ ಸಮೃದ್ಧಿಯಿಂದ I ಅವರ ಪಾನೀಯ ನಿನ್ನ ಸಂಭ್ರಮ ಪ್ರವಾಹದಿಂದ II

9 ನಿನ್ನಲ್ಲಿದೆ ಜೀವದ ಬುಗ್ಗೆ I ನಿನ್ನ ಬೆಳಕಿನಿಂದ ಬೆಳಕೆಮಗೆ II

10 ನಿನ್ನನರಿತವರನು ಪ್ರೀತಿಸು ಮುಂದಕ್ಕೂ I ಒಳಿತನ್ನು ಮಾಡು ನೇರಮನಸ್ಕರಿಗೂ II

11 ಗರ್ವಿಗಳ ಕಾಲಿಗೆ ನಾ ಬೀಳುವುದು ಬೇಡ I ದುರುಳರ ಕೈ ನನ್ನ ಹೊರದೂಡುವುದು ಬೇಡ II

12 ಕೇಡು ಮಾಡಿದವರಿದೋ ಕೆಳಗೆ ಬಿದ್ದಿಹರು I ಮರಳಿ ಏಳಲಾಗದೆ ಮಡಿದು ಬಿದ್ದಿಹರು II

  • Psalms 35 — previous chapter
  • Psalms 37 — next chapter
  • Psalms 36 — English (KJV)
  • Psalms 36 — English (WEB)
  • Psalms 36 — Tamil (தமிழ்)
  • Psalms 36 — Hindi (हिंदी)
  • Psalms 36 — Malayalam (മലയാളം)