ಕೀರ್ತನೆಗಳು 24 (Psalms 24)

Kannada Bible — Kannada (ಕನ್ನಡ)

1 ಪೊಡವಿಯೂ ಅದರಲ್ಲಿರುವುದೆಲ್ಲವೂ ಪ್ರಭುವಿನದೇ I ಜಗವೂ ಅದರ ಜೀವಜಂತುಗಳೆಲ್ಲವೂ ಆತನದೇ II

2 ಕಡಲನು ತಳಪಾಯವನಾಗಿಸಿದವನು ಆತನೆ I ಜಲರಾಶಿ ನಡುವೆ ಅದನು ಸ್ಥಿರಗೊಳಿಸಿದವನಾತನೆ II

3 ಪ್ರಭುವಿನ ಶಿಖರವನು ಏರಬಲ್ಲವನಾರು ? I ಆ ನಿವಾಸದಲಿ ನಿಲ್ಲಲು ಯೋಗ್ಯನಾರು ? II

4 ಅಂಥವನಿರಬೇಕು ಶುದ್ಧಹಸ್ತನು, ಸುಮನಸ್ಕನು I ಅನಾಚಾರಕೆ, ಅಪಮಾಣಿಕತೆಗೆ ಒಲಿಯನವನು II

5 ಲಭಿಸುವುದಾತನಿಗೆ ಶುಭ ಪ್ರಭುವಿನಿಂದ I ನೀತಿಯ ಸತ್ಫಲ ರಕ್ಷಕ ದೇವನಿಂದ II

6 ಇಂಥವರೆ ದೇವರ ದರ್ಶನಾಭ್ಯರ್ಥಿಗಳು I ಇಂಥವರೆ ಯಕೋಬ ದೇವನ ಭಕ್ತಾದಿಗಳು II

7 ಆಗಮಿಸುತಿಹನಿದೋ ಮಹಿಮಾವಂತ ರಾಜಾಧಿರಾಜನು I ತೆರೆದು ಸ್ವಾಗತಿಸಲಿ ಕದಗಳು, ಸನಾತನ ದ್ವಾರಗಳು II

8 ಯಾರಿವನು ಮಹಿಮಾವಂತ ರಾಜಾಧಿರಾಜನು? I ಇವನೇ ಪ್ರಭು, ಯುದ್ಧವೀರನು, ಶಕ್ತಿಸಮರ್ಥನು! II

9 ಆಗಮಿಸುತಿಹನಿದೋ ಮಹಿಮಾವಂತ ರಾಜಾಧಿರಾಜನು I ತೆರೆದು ಸ್ವಾಗತಿಸಲಿ ಕದಗಳು, ಸನಾತನ ದ್ವಾರಗಳು II

10 ಯಾರಿವನು ಮಹಿಮಾವಂತ ರಾಜಾಧಿರಾಜನು? I ಇವನೇ ಸೇನಾಧೀಶ್ವರನು, ಮಹಿಮಾರಾಜನು II

  • Psalms 23 — previous chapter
  • Psalms 25 — next chapter
  • Psalms 24 — English (KJV)
  • Psalms 24 — English (WEB)
  • Psalms 24 — Tamil (தமிழ்)
  • Psalms 24 — Hindi (हिंदी)
  • Psalms 24 — Malayalam (മലയാളം)