ಕೀರ್ತನೆಗಳು 21 (Psalms 21)

Kannada Bible — Kannada (ಕನ್ನಡ)

1 ಅರಸಗೆ ಹರ್ಷವಾಯಿತು ಪ್ರಭು, ನೀ ತೋರಿದ ಪರಾಕ್ರಮಕ್ಕಾಗಿ I ಪರಮಾನಂದಗೊಂಡನವನು, ನೀನಿತ್ತ ವಿಜಯೋತ್ಸವಕ್ಕಾಗಿ II

2 ಆತನ ಮನದಾಸೆಯನು ನೀ ಪೂರೈಸಿದೆ I ಆತನಧರ ಬಯಕೆಯನು ಅನುಗ್ರಹಿಸಿದೆ II

3 ನೀನಾತನನು ಸ್ವಾಗತಿಸಿದೆ ಶುಭಾಶಯದೊಂದಿಗೆ I ಚಿನ್ನದ ಕಿರೀಟವನು ಮುಡಿಸಿದೆ ಆತನ ಶಿರಸ್ಸಿಗೆ II

4 ಕೋರಿದನಾತನು ಜೀವಮಾನಕಾಲವನು I ನೀನಿತ್ತೆ ಯುಗಯುಗಾಂತರದಾಯುಷ್ಯವನು II

5 ನಿನ್ನ ನೆರವಿಂದೇರಿತು ಆತನ ಘನತೆ I ಶೋಭೆ, ಪ್ರಭಾವಗಳ ನೀನವನಿಗಿತ್ತೆ II

6 ಅಮರ ಭಾಗ್ಯಗಳನು ನೀನನುಗ್ರಹಿಸಿದೆ I ಶ್ರೀಸನ್ನಿಧಿಯಲಾತನನು ತೋಷಗೊಳಿಸಿದೆ II

7 ಅರಸನಿಗಿದೆ ಭರವಸೆ ಪ್ರಭುವಿನಲಿ I ಅವನಚಲನು, ಪರಾತ್ಪರನ ಕೃಪೆಯಲಿ II

8 ಶತ್ರುಗಳೆಲ್ಲರು ಸಿಕ್ಕಿಹೋಗುವರು ನಿನ್ನ ಕೈಗೆ I ಹಗೆಗಳೆಲ್ಲ ಸಿಕ್ಕಿಬೀಳುವರು ನಿನ್ನ ಬಲಗೈಗೆ II

9 ಅಗ್ನಿಕುಂಡವಾಗುವರವರು ನೀ ಪ್ರತ್ಯಕ್ಷನಾದಾಗ I ಕಬಳಿಸುವುದು ಕೋಪಾಗ್ನಿ, ಭಸ್ಮವಾಗ್ವರು ಪ್ರಭು ಬಂದಾಗ II

10 ನಿರ್ಮೂಲಮಾಡುವೆ ನೀನವರ ಸಂತಾನವನು ಧರೆಯಿಂದ I ಕುಡಿಯಿಲ್ಲದಾಗಿಸುವೆ ಅವರನು ಮಾನವರ ಮಧ್ಯದಿಂದ II

11 ತಂತ್ರೋಪಾಯಗಳ ಕಲ್ಪಿಸಿದರೂ ನಡೆಯದು I ಕೇಡನು ನಿನಗೆ ಬಗೆದರೂ ಅದು ಕೈಗೂಡದು II

12 ಬಾಣ ಹೂಡಿ ಅವರ ಹಣೆಗೆ ನೀ ಬಿಡುವೆ I ಬೆನ್ನುಮಾಡಿ ಅವರೋಡುವಂತೆ ಮಾಡುವೆ II

13 ಹೇ ಪ್ರಭು, ಪರಾಕ್ರಮ ತೋರಿ, ಪರಮಪದಗಳಿಸಿಕೊ I ಕೀರ್ತಿಸುತ ನಿನ್ನ ಸಾಮರ್ಥ್ಯವನು, ಪೊಗಳುವೆನಿದೊ II

  • Psalms 20 — previous chapter
  • Psalms 22 — next chapter
  • Psalms 21 — English (KJV)
  • Psalms 21 — English (WEB)
  • Psalms 21 — Tamil (தமிழ்)
  • Psalms 21 — Hindi (हिंदी)
  • Psalms 21 — Malayalam (മലയാളം)