ಕೀರ್ತನೆಗಳು 10 (Psalms 10)

Kannada Bible — Kannada (ಕನ್ನಡ)

1 ನನ್ನಿಂದೇಕೆ ಪ್ರಭು, ಅಷ್ಟು ದೂರವಿರುವೆ? I ಕಷ್ಟಕಾಲದಲೇಕೆ ಕಣ್ಮರೆಯಾಗಿರುವೆ? II

2 ಸೊಕ್ಕಿನಿಂದ ಶೋಷಿಸುತಿಹರು ದಲಿತರನು ದುರುಳರು I ಸಿಕ್ಕಿಬೀಳಲಿ ತಾವೇ ಒಡ್ಡಿದ ಉರಿಲಿನೊಳವರು II

3 ಕೇಡಿಗನು ತನ್ನ ಮನದಾಸೆಗಾಗಿ ಹೆಮ್ಮೆಪಡುತಿಹನು I ಲಾಭಬಡುಕನು ಪ್ರಭುವನು ಶಪಿಸಿ ತಿರಸ್ಕರಿಸುತಿಹನು II

4 ಸೊಕ್ಕೇರಿದ ಮುಖದಾತನು ಪ್ರಭುವನು ಅರಸುವುದಿಲ್ಲ I ಅವನ ಮನದೊಳಿದೊಂದೇ ಭಾವನೆ : “ದೇವರೇ ಇಲ್ಲ"! II

5 ಗೆಲುವೆ ಅವನ ವ್ಯವಹಾರವೆಲ್ಲದರ ಸಾರ I ನಿನ್ನ ನಿರ್ಣಯ ಅವನ ಗ್ರಹಿಕೆಗೆ ಅತಿ ದೂರ II ಶತ್ರುಗಳನು ಕಂಡರೆ ಅವನಿಗೆ ತಾತ್ಸಾರ II

6 ನೆನೆವನು ಮನದೊಳು ದುರುಳನಿಂತು: I “ಯಾರಿಗೂ ನನ್ನ ಕದಲಿಸಲಾಗದು I ಬಾರದು ನನಗೆಂದಿಗು ಆಪತ್ತು” II

7 ತುಂಬಿದೆ ಶಾಪಕೋಪ, ಕುತಂತ್ರ ಅವನ ಬಾಯಲಿ I ಅವಿತಿದೆ ಪಾಪ, ಅತಿವಿನಾಶ ನಾಲಗೆಯಡಿಯಲಿ II

8 ಊರು ಸಂದುಗೊಂದುಗಳಲೆ ಅವಿತಿದ್ದು I ನಿರ್ಗತಿಕರಿಗಾಗಿ ಅಲ್ಲೆ ಕಾದಿದ್ದು I ಕೊಲೆಗೈವನು ಮರೆಯಲ್ಲೆ ಮೇಲೆಬಿದ್ದು II

9 ಹೊಂಚುಹಾಕುವನವನು ಗುಹೆಯೊಳಗಿನ ಸಿಂಹದಂತೆ I ಕಾಯ್ದು ಹಿಡಿದೆಳೆವನು ದಲಿತರನು ಬಲೆಗೆ ಬೀಳ್ವಂತೆ II

10 ಬಲಿಯಾಗಿಹನು ಬಲತ್ಕಾರಕೆ ಅಬಲನು I ಕುಸಿದು ಬಿದ್ದಿಹನು ಜಜ್ಜರಿತವಾಗವನು II

11 ಮನದೊಳಿಂತೆಂದು ನೆನೆದನಾ ದುರುಳನು: I “ದೇವನಿದನು ಮರೆತು ವಿಮುಖನಾಗಿಹನು I ಇನ್ನೆಂದಿಗು ನೋಡನು ಇದೆಲ್ಲವನು” II

12 ಎದ್ದೇಳು ಪ್ರಭು, ದಲಿತನನು ಮರೆಯದಿರಯ್ಯಾ I ಆತನನು ರಕ್ಷಿಸಲು ದೇವಾ, ಕೈಚಾಚಯ್ಯಾ II

13 ದುರುಳನು ನಿನ್ನನಲಕ್ಷ್ಯ ಮಾಡುವುದೆಂತು? I “ದೇವನೆನ್ನ ವಿಚಾರಿಸನು” ಎನ್ನುವುದೆಂತು? II

14 ಹೌದು ದೇವಾ, ನೀ ವಿಚಾರಿಪವನು; ದುಃಖದುಗುಡ ಲೆಕ್ಕಿಸುವವನು I ತಬ್ಬಲಿಗಳಿಗೆ ತಂದೆ ನೀನು, ನಿರ್ಗತಿಕ ನಿನಗೆ ಶರಣಾಗತನು II

15 ಧೂರ್ತನ, ದುರುಳನ ಭುಜಬಲವನು ನೀ ಮುರಿದುಬಿಡು I ಆತನ ನೀಚತನವನು ಪರೀಕ್ಷಿಸಿ ಶೂನ್ಯಮಾಡು II

16 ಪ್ರಭುವಿನ ಶ್ರೀಸಾಮ್ರಾಜ್ಯವು ಅನವರತ I ಆತನ ನಾಡಲಿ ಮುಗಿಯಿತು ಅನ್ಯಜನರ ಉಳಿತ II

17 ದೀನ ಕೋರಿಕೆಯನು ಪ್ರಭು, ತೀರಿಸುವೆ I ಹುರಿದುಂಬಿಸಿ, ಅವರ ಮೊರೆಗೆ ಕಿವಿಗೊಡುವೆ II

18 ದಲಿತರಿಗೆ, ದಿಕ್ಕಿಲ್ಲದವರಿಗೆ ನ್ಯಾಯವನು ದೊರಕಿಸುವೆ I ಈ ಪರಿ ಇಳೆಮಾನವರ ತುಳಿತದಿಂದ ಪಾರುಮಾಡುವೆ II

  • Psalms 9 — previous chapter
  • Psalms 11 — next chapter
  • Psalms 10 — English (KJV)
  • Psalms 10 — English (WEB)
  • Psalms 10 — Tamil (தமிழ்)
  • Psalms 10 — Hindi (हिंदी)
  • Psalms 10 — Malayalam (മലയാളം)