ಧರ್ಮೋಪದೇಶಕಾಂಡ 25 (Deuteronomy 25)

Kannada Bible — Kannada (ಕನ್ನಡ)

1 “ಇಬ್ಬರು ವ್ಯಾಜ್ಯವಾಡುತ್ತಾ ನ್ಯಾಯಾಧಿಪತಿಗಳ ಬಳಿಗೆ ಬಂದರೆ ನ್ಯಾಯಾಧಿಪತಿಗಳು ತಪ್ಪಿಲ್ಲದವನನ್ನು ನಿರಪರಾಧಿ ಎಂದೂ ತಪ್ಪುಳ್ಳವನನ್ನು ಅಪರಾಧಿ ಎಂದೂ ತೀರ್ಮಾನಿಸಬೇಕು.

2 ಅಪರಾಧಿಗೆ ಪೆಟ್ಟಿನ ಶಿಕ್ಷೆ ತೀರ್ಮಾನವಾದರೆ ನ್ಯಾಯಾಧಿಪತಿ ಅವನನ್ನು ಮಲಗಿಸಿ, ಅವನ ಅಪರಾಧಕ್ಕೆ ಅನುಸಾರವಾಗಿ ಪೆಟ್ಟುಗಳನ್ನು ತನ್ನ ಮುಂದೆಯೇ ಹೊಡಿಸಿ ಲೆಕ್ಕಿಸಬೇಕು.

3 ಪೆಟ್ಟುಗಳ ಶಿಕ್ಷೆ ನಾಲ್ವತ್ತಕ್ಕಿಂತ ಹೆಚ್ಚಿರಬಾರದು. ಅಷ್ಟಕ್ಕಿಂತ ಮೀರಿ ನೀವು ಹೆಚ್ಚು ಪೆಟ್ಟುಗಳನ್ನು ಹೊಡಿಸಿದರೆ ನಿಮ್ಮ ಸ್ವದೇಶದವನನ್ನು ಕೇವಲ ನೀಚನನ್ನಾಗಿ ನೀವು ಕಂಡಂತಾಗುವುದು.

4 “ಕಣತುಳಿಯುವ ಎತ್ತಿನ ಬಾಯನ್ನು ಕಟ್ಟಬಾರದು.”

5 “ಅಣ್ಣತಮ್ಮಂದಿರು ಒಂದೇ ಕುಟುಂಬದಲ್ಲಿರುವಾಗ ಅಣ್ಣನು ಮಗನಿಲ್ಲದೆ ಸತ್ತರೆ ಅವನ ಹೆಂಡತಿ ಬೇರೆ ಪುರುಷನನ್ನು ಮದುವೆ ಆಗಬಾರದು. ಅವಳ ಮೈದುನ ಅವಳನ್ನು ಹೆಂಡತಿಯಾಗಿ ತೆಗೆದುಕೊಂಡು ಮೈದುನ ಧರ್ಮವನ್ನು ನೆರವೇರಿಸಬೇಕು.

6 ಅವಳಲ್ಲಿ ಹುಟ್ಟುವ ಚೊಚ್ಚಲುಮಗನನ್ನು ಸತ್ತವನ ಮಗನೆಂದೇ ಎಣಿಸಬೇಕು; ಹೀಗೆ ಮಾಡುವುದರಿಂದ ಸತ್ತವನ ಹೆಸರು ಇಸ್ರಯೇಲರಲ್ಲಿ ಅಳಿದು ಹೋಗುವುದಿಲ್ಲ.

7 ತಮ್ಮನು ಅಣ್ಣನ ಹೆಂಡತಿಯನ್ನು ಪರಿಗ್ರಹಿಸಲೊಲ್ಲದೆ ಹೋದರೆ ಅವಳು ಚಾವಡಿಗೆ ಹೋಗಿ ಹಿರಿಯರಿಗೆ, ‘ನನ್ನ ಗಂಡನ ತಮ್ಮನು ತನ್ನ ಅಣ್ಣನ ಹೆಸರನ್ನು ಉಳಿಸಲೊಲ್ಲನು; ಮೈದುನ ಧರ್ಮವನ್ನು ನಡಿಸುವುದಿಲ್ಲ ಎನ್ನುತ್ತಾನೆ’ ಎಂದು ತಿಳಿಸಬೇಕು.

8 ಆಗ ಆ ಊರಿನ ಹಿರಿಯರು ಅವನನ್ನು ಕರೆಸಿ ವಿಚಾರಿಸಿದಲ್ಲಿ ಅವನು ಅವರ ಮುಂದೆ ನಿಂತು, ‘ಈಕೆಯನ್ನು ಪರಿಗ್ರಹಿಸುವುದಕ್ಕೆ ನನಗೆ ಇಷ್ಟವಿಲ್ಲ’ ಎಂದು ಹೇಳುವ ಪಕ್ಷಕ್ಕೆ

9 ಅವನ ಅತ್ತಿಗೆ ಹಿರಿಯರ ಎದುರಿನಲ್ಲಿ ಅವನ ಕೆರವನ್ನು ಅವನ ಕಾಲಿನಿಂದ ತೆಗೆದುಬಿಟ್ಟು, ಅವನ ಮುಖದ ಮೇಲೆ ಉಗುಳಿ, ‘ಅಣ್ಣನಿಗೆ ಸಂತಾನವನ್ನು ಹುಟ್ಟಿಸಲೊಲ್ಲದವರೆಲ್ಲರಿಗೂ ಇಂಥ ಅವಮಾನವಾಗಲಿ,’ ಎಂದು ಹೇಳಬೇಕು.

10 ಆ ಮನುಷ್ಯನ ಮನೆಯವರಿಗೆ, ‘ಕೆರಬಿಚ್ಚಿಸಿಕೊಂಡವನ ಮನೆಯವರು’ ಎಂಬ ಹೆಸರು ಬರುವುದು.

11 “ಇಬ್ಬರು ಗಂಡಸರು ಜಗಳವಾಡುತ್ತಿರುವಾಗ ಅವರಲ್ಲಿ ಒಬ್ಬನ ಹೆಂಡತಿ ಬಂದು ತನ್ನ ಗಂಡನನ್ನು ಬಿಡಿಸಬೇಕೆಂದು ಆ ಇನ್ನೊಬ್ಬನ ಜನನೇಂದ್ರಿಯವನ್ನು ಹಿಡಿದುಕೊಂಡರೆ,

12 ಅವಳ ಕೈ ಕಡಿದುಹಾಕಿಸಬೇಕು; ಅವಳಿಗೆ ಕನಿಕರ ತೋರಿಸಬಾರದು.

13 “ಹೆಚ್ಚುಕಡಿಮೆಯಾಗಿರುವ ಎರಡು ವಿಧವಾದ ಕಳ್ಳತೂಕದ ಬಟ್ಟುಗಳನ್ನು ನಿಮ್ಮ ಚೀಲದಲ್ಲಿಟ್ಟುಕೊಳ್ಳಬೇಡಿ.

14 ಹೆಚ್ಚುಕಡಿಮೆಯಾದ ಎರಡು ವಿಧವಾದ ಕಳ್ಳಸೇರುಗಳು ನಿಮ್ಮ ಮನೆಯಲ್ಲಿರಬಾರದು.

15 ನಿಮ್ಮ ತೂಕದ ಬಟ್ಟೂ, ನಿಮ್ಮ ಅಳತೆಯ ಸೇರೂ ನ್ಯಾಯವಾಗಿಯೇ ಇರಬೇಕು. ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಕೊಡುವ ನಾಡಿನಲ್ಲಿ ಬಹುಕಾಲ ಬಾಳುವಿರಿ.

16 ನ್ಯಾಯ ವಿರುದ್ಧವಾದ ಅಳತೆತೂಕಗಳನ್ನು ಮಾಡುವವರೆಲ್ಲರು ನಿಮ್ಮ ದೇವರಾದ ಸರ್ವೇಶ್ವರನಿಗೆ ಹೇಯವಾಗಿದ್ದಾರೆ.

17 “ನೀವು ಈಜಿಪ್ಟ್ ದೇಶದಿಂದ ಬರುವಾಗ ದಾರಿಯಲ್ಲಿ ಅಮಾಲೇಕ್ಯರು ನಿಮ್ಮನ್ನು ಎದುರಿಸಿದ್ದನ್ನು ಜ್ಞಾಪಿಸಿಕೊಳ್ಳಿ.

18 ಅವರು ದೇವರಲ್ಲಿ ಸ್ವಲ್ಪವೂ ಭಯಭಕ್ತಿಯಿಲ್ಲದವರು; ನೀವು ದಣಿದು ಬಳಲಿದ್ದಾಗ ನಿಮ್ಮವರಲ್ಲಿ ಹಿಂದೆಬಿದ್ದ ಬಲಹೀನರನ್ನು ಸಂಹಾರಮಾಡಿದರು.

19 ಆದಕಾರಣ ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಸ್ವದೇಶವಾಗಲೆಂದು ಕೊಡುವ ನಾಡಿನಲ್ಲಿ ನಿಮ್ಮನ್ನು ಸೇರಿಸಿ, ಸುತ್ತಲು ಯಾವ ಶತ್ರುಗಳೂ ಇಲ್ಲದಂತೆ ಮಾಡಿದಾಗ, ಜಗದಲ್ಲಿ ಅಮಾಲೇಕ್ಯರ ಹೆಸರೇ ಉಳಿಯದಂತೆ ಮಾಡಬೇಕು; ಇದನ್ನು ಮರೆಯಬೇಡಿ.

  • Deuteronomy 24 — previous chapter
  • Deuteronomy 26 — next chapter
  • Deuteronomy 25 — English (KJV)
  • Deuteronomy 25 — English (WEB)
  • Deuteronomy 25 — Tamil (தமிழ்)
  • Deuteronomy 25 — Hindi (हिंदी)
  • Deuteronomy 25 — Malayalam (മലയാളം)