2 ಪೂರ್ವಕಾಲದ ವೃತ್ತಾಂತ 11 (2 Chronicles 11)

Kannada Bible — Kannada (ಕನ್ನಡ)

1 ರೆಹಬ್ಬಾಮನು ಜೆರುಸಲೇಮನ್ನು ಮುಟ್ಟಿದ ನಂತರ ಇಸ್ರಯೇಲರಿಗೆ ವಿರುದ್ಧ ಯುದ್ಧಮಾಡುವುದಕ್ಕೂ ಅವರ ರಾಜ್ಯವನ್ನು ಮರಳಿ ವಶಪಡಿಸಿಕೊಳ್ಳುವುದಕ್ಕೂ ಯೆಹೂದ ಬೆನ್ಯಾಮೀನ್ ಕುಲಗಳಿಂದ ಲಕ್ಷದ ಎಂಬತ್ತು ಸಾವಿರ ಮಂದಿ ಶ್ರೇಷ್ಟ ಸೈನಿಕರನ್ನು ಕೂಡಿಸಿದನು.

2 ಆಗ ದೈವಪುರುಷನಾದ ಶೆಮಾಯನಿಗೆ ಸರ್ವೇಶ್ವರನ ಈ ವಾಣಿ ಕೇಳಿಸಿತು:

3 “ನೀನು ಹೋಗಿ ಸೊಲೊಮೋನನ ಮಗನೂ ಜುದೇಯದ ಅರಸನೂ ಆದ ರೆಹಬ್ಬಾಮನಿಗೂ ಯೆಹೂದ ಬೆನ್ಯಾಮೀನ್ ಕುಲಗಳ ಇಸ್ರಯೇಲರೆಲ್ಲರಿಗೂ,

4 ‘ಸರ್ವೇಶ್ವರ ಇಂತೆನ್ನುತ್ತಾರೆ: ನೀವು ನಿಮ್ಮ ಸಹೋದರರೊಡನೆ ಯುದ್ಧಮಾಡುವುದಕ್ಕೆ ಹೋಗಬಾರದು. ಎಲ್ಲರು ಹಿಂದಿರುಗಿಹೋಗಿರಿ; ಈ ವಿಭಜನಾಕಾರ್ಯ ಸರ್ವೇಶ್ವರನಿಂದಾಗಿದೆ’ ಎಂದು ಹೇಳಬೇಕು.” ಅಂತೆಯೇ ಆ ಜನರು ಸರ್ವೇಶ್ವರನ ಮಾತನ್ನು ಕೇಳಿ ಯಾರೊಬ್ಬಾಮನಿಗೆ ವಿರೋಧವಾಗಿ ಹೊರಡದೆ ಹಿಂದಿರುಗಿ ಹೋದರು.

5 ರೆಹಬ್ಬಾಮನು ಜೆರುಸಲೇಮಿನಲ್ಲಿ ವಾಸವಾಗಿದ್ದು ಜುದೇಯದ ಈ ಕೆಳಕಂಡ ಪಟ್ಟಣಗಳನ್ನು ಭದ್ರಪಡಿಸಿದನು:

6 ಬೆತ್ಲೆಹೇಮ್, ಏತಾಮ್, ತೆಕೋವ,

7 ಬೇತ್ಚೂರ್, ಸೋಕೋ, ಅದುಲ್ಲಾಮ್, ಗತ್‍ಊರು,

9 ಮಾರೇಷ, ಜೀಫ್, ಅದೋರೈಮ್, ಲಾಕೀಷ್,

10 ಅಜೇಕ, ಚೊರ್ಗ, ಅಯ್ಯಾಲೋನ್ ಹಾಗೂ ಹೆಬ್ರೋನ್. ಕೋಟೆಕೊತ್ತಲಗಳಿಂದ ಕೂಡಿದ್ದ ಈ ಪಟ್ಟಣಗಳು ಯೆಹೂದ-ಬೆನ್ಯಾಮೀನ್ ಕುಲ ಪ್ರಾಂತ್ಯಗಳಾಗಿದ್ದವು.

11 ಅವನುಈ ಕೋಟೆಗಳನ್ನು ಬಲಪಡಿಸಿ, ನಾಯಕರ ವಶಕ್ಕೆ ಕೊಟ್ಟು, ಪ್ರತಿ ಒಂದರಲ್ಲಿ ಆಹಾರಪದಾರ್ಥ, ಎಣ್ಣೆ, ದ್ರಾಕ್ಷಾರಸ ಇವುಗಳನ್ನೂ ಗುರಾಣಿಬರ್ಜಿಗಳನ್ನೂ ಸಂಗ್ರಹಿಸಿಟ್ಟನು.

12 ಹೀಗೆ ಇವುಗಳನ್ನು ಮತ್ತಷ್ಟು ಸುಭದ್ರಪಡಿಸಿದನು.

13 ಯೆಹೂದ, ಬೆನ್ಯಾಮೀನ್ ಕುಲಗಳವರು ಅವನ ಸ್ವಾಧೀನದಲ್ಲಿದ್ದುದಲ್ಲದೆ ಬೇರೆ ಎಲ್ಲ ಇಸ್ರಯೇಲ್ ಪ್ರಾಂತ್ಯಗಳಲ್ಲಿದ್ದ ಯಾಜಕರು ಹಾಗೂ ಲೇವಿಯರು ಅವನೊಡನೆ ಸೇರಿಕೊಂಡರು.

14 ಲೇವಿಯರು ಸರ್ವೇಶ್ವರನಿಗೆ ಯಾಜಕ ಸೇವೆಮಾಡದಂತೆ ಯಾರೊಬ್ಬಾಮನು ಮತ್ತು ಅವನ ಮಕ್ಕಳು ಅವರನ್ನು ಬಹಿಷ್ಕರಿಸಿ ಇದ್ದರು.

15 ತಾವೇ ಏರ್ಪಡಿಸಿದ್ದ ಪೂಜಾಸ್ಥಳಗಳಿಗಾಗಿ ಹಾಗೂ ಅಜದೇವತೆ, ಹೋರಿಕರುಗಳ ಮೂರ್ತಿಪೂಜೆಗಾಗಿ ಬೇರೆ ಪೂಜಾರಿಗಳನ್ನು ನೇಮಿಸಿಕೊಂಡಿದ್ದರು. ಆದುದರಿಂದ ಅವರು ಗೋಮಾಳಗಳಿದ್ದ ತಮ್ಮ ಸೊತ್ತುಗಳನ್ನು ಬಿಟ್ಟು ಜುದೇಯನಾಡಿಗೂ ಜೆರುಸಲೇಮಿಗೂ ಬಂದರು.

16 ಇಸ್ರಯೇಲರ ಎಲ್ಲ ಕುಲಗಳಲ್ಲಿ ಇಸ್ರಯೇಲ್ ದೇವರಾದ ಸರ್ವೇಶ್ವರನ ದರ್ಶನವನ್ನು ಬಯಸುತ್ತಿದ್ದವರು ತಮ್ಮ ಪೂರ್ವಜರ ದೇವರಾದ ಸರ್ವೇಶ್ವರನಿಗೆ ಬಲಿಯರ್ಪಿಸುವುದಕ್ಕಾಗಿ ಆ ಲೇವಿಯರನ್ನು ಹಿಂಬಾಲಿಸಿ ಜೆರುಸಲೇಮಿಗೆ ಬಂದರು.

17 ಇವರೆಲ್ಲರು ಮೊದಲನೆಯ ಮೂರು ವರ್ಷಗಳಲ್ಲಿ ದಾವೀದ ಹಾಗೂ ಸೊಲೊಮೋನರ ಮಾರ್ಗದಲ್ಲೇ ನಡೆಯುತ್ತಿದ್ದರು. ಎಂದೇ ಜುದೇಯರಾಜ್ಯವು ಆ ವರ್ಷಗಳಲ್ಲಿ ವೃದ್ಧಿಯಾಗಿ, ಸೊಲೊಮೋನನ ಮಗ ರೆಹಬ್ಬಾಮನು ಬಲಿಷ್ಠನಾದನು.

18 ರೆಹಬ್ಬಾಮನು, ದಾವೀದನ ಮಗ ಯೆರೀಮೋತನಿಗೆ ಜೆಸ್ಸೆಯ ಮೊಮ್ಮಗಳೂ ಎಲೀಯಾಬನ ಮಗಳೂ ಆದ ಅಬೀಹೈಲಳಲ್ಲಿ ಹುಟ್ಟಿದ ಮಹ್ಲತ್ ಎಂಬಾಕೆಯನ್ನು ಹೆಂಡತಿಯನ್ನಾಗಿ ತೆಗೆದುಕೊಂಡನು.

19 ಆಕೆ ಅವನಿಂದ ಯೆಗೂಷ್, ಶೆಮರ್ಯ, ಜಾಹಮ್ ಎಂಬ ಗಂಡು ಮಕ್ಕಳನ್ನು ಹೆತ್ತಳು.

20 ಅನಂತರ ಅವನು ಅಬ್ಷಾಲೋಮನ ಮಗಳಾದ ಮಾಕ ಎಂಬಾಕೆಯನ್ನು ಮದುವೆ ಮಾಡಿಕೊಂಡನು; ಆಕೆ ಅವನಿಂದ ಅಬೀಯ, ಅತ್ತೈ, ಜೀಜ, ಶೆಲೋಮೀತ್ ಎಂಬುವರನ್ನು ಹೆತ್ತಳು.

21 ರೆಹಬ್ಬಾಮನು ತನ್ನ ಎಲ್ಲಾ ಪತ್ನಿಯರಲ್ಲಿಯೂ ಉಪಪತ್ನಿಯರಲ್ಲಿಯೂ ಅಬ್ಷಾಲೋಮನ ಮಗಳಾದ ಮಾಕಳನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದನು. ಅವನಿಗೆ ಹದಿನೆಂಟು ಮಂದಿ ಪತ್ನಿಯರೂ ಅರವತ್ತು ಮಂದಿ ಉಪಪತ್ನಿಯರೂ ಇದ್ದರು. ಇವರಲ್ಲಿ ಅವನಿಗೆ ಇಪ್ಪತ್ತ ಎಂಟು ಮಂದಿ ಗಂಡುಮಕ್ಕಳೂ ಅರವತ್ತು ಮಂದಿ ಹೆಣ್ಣು ಮಕ್ಕಳೂ ಹುಟ್ಟಿದರು.

22 ರೆಹಬ್ಬಾಮನು ಮಾಕಳ ಮಗನಾದ ಅಬೀಯನನ್ನು ಅರಸನನ್ನಾಗಿ ಮಾಡಬೇಕೆಂದು ಅವನನ್ನು ಅವನ ಅಣ್ಣತಮ್ಮಂದಿರಲ್ಲಿ ಪ್ರಧಾನನನ್ನಾಗಿಯೂ ನೇಮಿಸಿದನು.

23 ತನ್ನ ಉಳಿದ ಎಲ್ಲ ಮಕ್ಕಳನ್ನು ಜಾಣತನದಿಂದ ವಿಂಗಡಿಸಿ ಯೆಹೂದ-ಬೆನ್ಯಾಮೀನ್ ಕುಲಪ್ರದೇಶಗಳಲ್ಲಿ ಇದ್ದ ಕೋಟೆ ಕೊತ್ತಲುಗಳಿಂದ ಕೂಡಿದ ಆಯಾ ಪಟ್ಟಣಗಳಲ್ಲಿಟ್ಟು, ಅವರಿಗೆ ಬೇಕಾದಷ್ಟು ಜೀವನಾಂಶವನ್ನು ಏರ್ಪಡಿಸಿ, ಹಲವಾರು ಹೆಂಡತಿಯರನ್ನೂ ಗೊತ್ತುಮಾಡಿಕೊಟ್ಟನು.

  • 2 Chronicles 10 — previous chapter
  • 2 Chronicles 12 — next chapter
  • 2 Chronicles 11 — English (KJV)
  • 2 Chronicles 11 — English (WEB)
  • 2 Chronicles 11 — Tamil (தமிழ்)
  • 2 Chronicles 11 — Hindi (हिंदी)
  • 2 Chronicles 11 — Malayalam (മലയാളം)