ಪರಮಗೀತ 3 (Song of Solomon 3)

Kannada Bible — Kannada (ಕನ್ನಡ)

1 ನಲ್ಲೆ : ನನ್ನ ಪ್ರಾಣಕಾಂತನನ್ನು ರಾತ್ರಿಯೆಲ್ಲಾ ಹುಡುಕಿದೆ ಹಾಸಿಗೆಯ ಮೇಲೆ ಹಾತೊರೆದೆ ಹುಡುಕಿ ಹುಡುಕಿ ಸಿಗಲಾರದೆ ಬೇಸತ್ತೆ.

2 ಎದ್ದು ಊರೆಲ್ಲಾ ಅಲೆದಾಡಿದೆ ಬೀದಿಗಳಲ್ಲಿ, ಚೌಕಗಳಲ್ಲಿ ಹುಡುಕಾಡಿದೆ. ಹುಡುಕಿ ಹುಡುಕಿ ಸಿಗಲಾರದೆ ಬೇಸತ್ತೆ.

3 ಊರಲ್ಲಿ ತಿರುಗುವ ಪಹರೆಯವರ ಕೈಗೆ ಸಿಕ್ಕಿಬಿದ್ದೆ “ನನ್ನ ಪ್ರಾಣಕಾಂತನನ್ನು ಕಂಡಿರಾ?’ ಎಂದು ವಿಚಾರಿಸಿದೆ.

4 ಅವರನ್ನು ಬಿಟ್ಟ ತುಸು ಹೊತ್ತಿನಲ್ಲೆ ನನ್ನ ಪ್ರಾಣಕಾಂತನನ್ನು ಕಂಡುಕೊಂಡೆ. ತಾಯ ಮನೆಗೆ, ನನ್ನ ಹೆತ್ತವಳ ಮನೆಗೆ ಕರೆದೊಯ್ದೆ ಕೈಯ ಬಿಡದೆಯೆ ಕರೆದುಕೊಂಡು ಹೋದೆ.

5 ಜೆರುಸಲೇಮಿನ ಮಹಿಳೆಯರೇ, “ತಾನೇ ಏಳುವುದಕ್ಕೆ ಮುಂಚೆ ನನ್ನ ಪ್ರಿಯನನ್ನು ಎಚ್ಚರಿಸದಿರಿ ಆತನ ವಿಶ್ರಾಂತಿಗೆ ಭಂಗ ತರದಿರಿ” ಎಂದು ನಿಮಗೆ ವಿಧಿಸಿರುವೆನು ವನದ ಹುಲ್ಲೆ ಹರಿಣಿಗಳ ಮೇಲೆ ಆಣೆಯಿಟ್ಟು.

6 ವರ್ತಕರು ಮಾರುವ ಸಕಲ ಸುಗಂಧ ತೈಲಗಳಿಂದ ರಸಗಂಧ ಸಾಂಬ್ರಾಣಿ ಮುಂತಾದ ದ್ರವ್ಯಗಳಿಂದ ಧೂಮಸ್ತಂಭಗಳೋಪಾದಿ ಹೊರಹೊಮ್ಮುತ್ತಿರುವ ಅರಣ್ಯದ ಮಾರ್ಗವಾಗಿ ಬರುತ್ತಿರುವ ಆ ಮೆರವಣಿಗೆ ಯಾರದು?

7 ಇದೋ, ನೋಡು ಸೊಲೊಮೋನನ ಪಲ್ಲಕ್ಕಿ ಅದರ ಸುತ್ತ ಇಸ್ರಯೇಲಿನ ಶೂರರು ಅರವತ್ತು ಮಂದಿ ಯುದ್ಧಪ್ರವೀಣರಾದ ಅವರಾಗಿಹರು ಶಸ್ತ್ರಧಾರಿ ಕತ್ತಿಯ ಕಟ್ಟಿಹರು ಪ್ರತಿಯೊಬ್ಬರು ಸೊಂಟಕ್ಕೆ ಕತ್ತಲ ದುರಂತಗಳನ್ನು ಎದುರಿಸಲಿಕ್ಕೆ.

9 ಅರಸ ಸೊಲೊಮೋನನು ಮಾಡಿಸಿಕೊಂಡನು ಲೆಬನೋನಿನ ಮರದಿಂದ ಆ ಪಲ್ಲಕ್ಕಿಯನು.

10 ಸ್ತಂಭಗಳನ್ನು ಬೆಳ್ಳಿಯಿಂದ ಒರಗನ್ನು ಬಂಗಾರದಿಂದ ಅದರ ಮೆತ್ತೆಯನ್ನು ಸಕಲಾತಿಯಿಂದ ಅಲಂಕರಿಸಿಹರು ಜೆರುಸಲೇಮಿನ ಮಹಿಳೆಯರು ಪ್ರೀತಿಯಿಂದ.

11 ಸಿಯೋನಿನ ಮಹಿಳೆಯರೇ, ಹೊರಟುಬನ್ನಿ ಅರಸ ಸೊಲೊಮೋನನನ್ನು ನೋಡಬನ್ನಿ ಆತನ ವಿವಾಹಮಹೋತ್ಸವ ದಿನದಂದು ಆತನ ತಾಯಿ ತೊಡಿಸಿದ ಮುಕುಟವನ್ನು ಆತ ಧರಿಸಿರುವುದನ್ನು ನೋಡಬನ್ನಿ.

  • Song of Solomon 2 — previous chapter
  • Song of Solomon 4 — next chapter
  • Song of Solomon 3 — English (KJV)
  • Song of Solomon 3 — English (WEB)
  • Song of Solomon 3 — Tamil (தமிழ்)
  • Song of Solomon 3 — Hindi (हिंदी)
  • Song of Solomon 3 — Malayalam (മലയാളം)