Kannada Bible — Kannada (ಕನ್ನಡ)
1 ಕೈಬಿಟ್ಟೆ ದೇವಾ, ನಮ್ಮನು ಕೈಬಿಟ್ಟೆ I ಕೋಪದಿಂದೆಮ್ಮನು ತಳ್ಳಿ ಕೆಡವಿಬಿಟ್ಟೆ I ಉದ್ಧಾರವಾಗ್ವೆವು ನೀ ಮರಳಿ ಬೆಂಗೊಡೆ II
2 ನಾಡನು ನಡುಗಿಸಿ ಬಿಡಿಬಿಡಿಯಾಗಿಸಿದೆ I ಅದರೊಡಕನು ಸರಿಮಾಡು ತಡವರಿಸದೆ II
3 ನಿನ್ನ ಜನರನು ಗುರಿಪಡಿಸಿದೆ ಸಂಕಟಕೆ I ಭ್ರಮಣಗೊಳಿಪ ಮದ್ಯವ ಕುಡಿಸಿದೆ ನಮಗೆ II
4 ಪರಾಜಯ ಪತಾಕೆಯ ಹರಿಸಿದೆ ನಿನಗಂಜಿ ನಡೆದವರಿಗೆ I ಅವರು ಹೆದರಿ ಓಡುವಂತೆ ಮಾಡಿದೆ ಬಿಲ್ಲು ಬಾಣಗಳಿಗೆ II
5 ನಿನಗೆ ಪ್ರಿಯರಾದ ನಮ್ಮ ಮೊರೆಯನಾಲಿಸು I ನಿನ್ನ ಭುಜಬಲದಿಂದ ನಮ್ಮನು ಜಯಗೊಳಿಸು II
6 ಗರ್ಭಗುಡಿಯಿಂದಲೇ ದೇವನಿಂತೆಂದನು; “ಜಯಶೀಲ ನಾನು, ಹಂಚುವೆನು ಶೆಖೆಮನು I ಅಳೆದು ಕೊಡುವೆನು ಸುಖೋತೆಂಬ ಬಯಲನು II
7 ಗಿಲ್ಯಾದ ಸೀಮೆ, ಮನಸ್ಸೆ ನಾಡು ನನ್ನವೆ I ಎಫ್ರಯಿಮ್ ಗೋತ್ರವು ಶಿರಸ್ತ್ರಾಣವು ನನಗೆ I ಜೂದ ಕುಲವು ರಾಜದಂಡವು ನನ್ನ ಕೈಗೆ II
8 ಮೋವಾಬ್ ಪ್ರಾಂತ್ಯವು ನನ್ನ ಸ್ನಾನ ಪಾತ್ರೆಯು I ಎದೋಮ್ ಪ್ರಾಂತ್ಯವು ನನ್ನ ಕೆರಗಳಿಗೆ ಎಡೆಯು I ನನ್ನ ಗೆಲ್ವೆನೆಂದಿತೆ ಫಿಲಿಷ್ಟಿಯ ಪ್ರಾಂತ್ಯವು!” II
9 ಕೋಟೆಯ ನಗರಕೆ ನನ್ನನು ಕರೆದೊಯ್ಯುವರಾರು? I ಎದೋಮ್ ಪ್ರಾಂತ್ಯಕೆ ನನ್ನ ಕೊಂಡೊಯ್ಯುವವರಾರು? II
10 ದೇವಾ ನೀ, ನಮ್ಮನು ಕೈ ಬಿಟ್ಟಿರುವುದು ಸರಿಯೋ? I ನಮ್ಮ ಸೈನ್ಯ ಸಮೇತ ನೀ ಬರದೆಹೋದೆಯೋ? II
11 ಶತ್ರು ವಿರುದ್ಧ ಸಹಾಯಮಾಡಯ್ಯಾ I ಮಾನವ ನೆರವು ನಮಗೆ ವ್ಯರ್ಥವಯ್ಯಾ II
12 ನಮ್ಮ ಪರ ದೇವನಿರಲು ಹೆಣಗುವೆವು ಶೂರರಾಗಿ I ವೈರಿಗಳನು ತುಳಿದುಬಿಡುವನಾತ ಖರೆಯಾಗಿ II