ಕೀರ್ತನೆಗಳು 56 (Psalms 56)

Kannada Bible — Kannada (ಕನ್ನಡ)

1 ಕರುಣೆತೋರು ದೇವಾ, ಜನರೆನ್ನ ಬೆನ್ನಟ್ಟಿ ಬರುತಿಹರು I ದಿನವೆಲ್ಲ ಕದನ ಮಾಡಿ ಶತ್ರುಗಳೆನ್ನ ಬಾಧಿಸುತಿಹರು II

2 ವಿರೋಧಿಗಳು ದಿನವಿಡೀ ಬೆನ್ನಟ್ಟಿ ಬರುತಿಹರು I ಸೊಕ್ಕಿನಿಂದ ನನಗೆದುರಾಗಿ ನಿಂತಿರುವರು ಹಲವರು II

3 ಹೆದರಿಕೆ ಉಂಟಾದಾಗ I ನೀನೆ ನನಗೆ ಆಶ್ರಯ II

4 ದೇವರಲ್ಲೇ ನಿರ್ಭೀತ ನಂಬಿಕೆ ನನಗೆ I ಹೆಮ್ಮೆ ಪಡುವೆನು ಆತನಿತ್ತ ವಾಗ್ದಾನಕೆ I ನರಮಾನವರು ಏನು ಮಾಡಿಯಾರೆನಗೆ? II

5 ಸದಾ ಅಪಾರ್ಥ ಕಟ್ಟುವರೆನ್ನ ಮಾತಿಗೆ I ಅವರು ಬಗೆವುದೆಲ್ಲಾ ಕೇಡೇ ನನಗೆ II

6 ಒಟ್ಟುಗೂಡಿ ಹೊಂಚುಹಾಕುತಿಹರು I ಹೆಜ್ಜೆಹಿಡಿದು ಕೊಲ್ಲ ಬರುತಿಹರು II

7 ಇಂಥಾ ದ್ರೋಹಿಗಳು ತಪ್ಪಿಸಿಕೊಳ್ಳಬಾರದಯ್ಯಾ I ರೌದ್ರದಿಂದಾ ಜನರನು ನೀ ಕೆಡವಿಬಿಡು ದೇವಾ II

8 ನನ್ನ ಅಲೆಮಾರಿತನದ ಲೆಕ್ಕವಿಟ್ಟಿರುವೆ ನಿನ್ನಲಿ I ನನ್ನ ಕಣ್ಣೀರನು ತುಂಬಿಡು ನಿನ್ನ ಬುದ್ದಲಿಯಲಿ I ಅದರ ಕತೆ ಬರೆದಿದೆಯಲ್ಲವೆ ನಿನ್ನ ಪುಸ್ತಕದಲಿ? II

9 ನಾ ಮೊರೆಯಿಟ್ಟಾಗ ಶತ್ರುಗಳು ಪರಾರಿ ಹಿಂದಕೆ I ದೇವನಿರುವುದು ನನ್ನ ಕಡೆ, ಇದು ಗೊತ್ತಿದೆ ನನಗೆ II

10 ನಾ ಹೆಮ್ಮೆಪಡುವುದು ದೇವನಲಿ, ಆತನ ವಾಗ್ದಾನದಲಿ I ನಾ ಹೆಮ್ಮೆಪಡುವುದು ಪ್ರಭುವಿನಲಿ, ಆತನ ವಾಗ್ದಾನದಲಿ II

11 ದೇವರಲ್ಲೇ ನಿರ್ಭೀತ ನಂಬಿಕೆ ನನಗೆ I ನರಮಾನವರು ಏನು ಮಾಡಿಯಾರೆನಗೆ II

12 ನಿನ್ನ ಮುಂದೆ ಜೀವನ್ ಜ್ಯೋತಿಯಲಿ ನಾ ನಡೆಯಮಾಡಿರುವೆ I ಮೃತ್ಯುವಿನಿಂದೆನ್ನ ಪ್ರಾಣವನು ನೀ ಮುಕ್ತಗೊಳಿಸಿರುವೆ I ಜಾರಿ ಬೀಳದಂತೆನ್ನ ಪಾದಗಳನು ಕಾದಿರಿಸಿರುವೆ II ಎಂದೇ ನಿನಗೆ ಹೊತ್ತ ಹರಕೆಗಳನು ಸಲ್ಲಿಸುವೆ I ಕೃತಜ್ಞತಾಬಲಿಗಳನು ದೇವಾ, ನಿನಗರ್ಪಿಸುವೆ II

  • Psalms 55 — previous chapter
  • Psalms 57 — next chapter
  • Psalms 56 — English (KJV)
  • Psalms 56 — English (WEB)
  • Psalms 56 — Tamil (தமிழ்)
  • Psalms 56 — Hindi (हिंदी)
  • Psalms 56 — Malayalam (മലയാളം)