ಕೀರ್ತನೆಗಳು 5 (Psalms 5)

Kannada Bible — Kannada (ಕನ್ನಡ)

1 ಕಿವಿಗೊಡು ಪ್ರಭು, ಎನ್ನ ನುಡಿಗೆ I ಬಗೆಗೊಡು ಎನ್ನಾತ್ಮದ ಮೊರೆಗೆ II

2 ಎನ್ನರಸನೇ, ದೇವನೇ I ಮಾಡುವೆ ನಿನಗೆ ಪ್ರಾರ್ಥನೆ I ನೀ ಆಲಿಸೆನ್ನ ಯಾಚನೆ II

3 ಉದಯಕಾಲದಲ್ಲಿ ಪ್ರಭು, ನಿನಗೆ ಕೇಳಿಬರುವುದು ನನ್ನ ಸ್ವರ I ಉದಯಾರಾಧನೆ ಮಾಡಿ ಎದುರು ನೋಡುತ್ತಿರುವೆ ನಾ ಸದುತ್ತರ II

4 ದುಷ್ಟತನಕೆ ದೇವ, ನಿನಗಿಲ್ಲ ಒಲವು I ಕೆಟ್ಟತನಕೆ ನಿನ್ನ ಬಳಿಯಿಲ್ಲ ನಿಲುವು II

5 ನಿಲ್ಲಲಾರರು ನಿನ್ನ ಮುಂದೆ ಗರ್ವಿಗಳು I ನಿನಗೆ ವೈರಿಗಳಾಗುವರು ಅಧರ್ಮಿಗಳು II

6 ಹುಸಿ ನುಡಿವವರನು ಪ್ರಭು, ನೀ ನಾಶಮಾಡುವೆ I ಹಿಂಸಕರನು, ವಂಚಕರನು ನೀ ಹೇಸಿಬಿಡುವೆ II

7 ನಿನ್ನ ಮಂದಿರಕೆ ಬರುವೆ ನಿನ್ನಪಾರ ಪ್ರೀತಿಯ ನಿಮಿತ್ತ I ಭಕುತಿಯಿಂದ ಅಡ್ಡಬೀಳುವೆ ನಿನ್ನ ಪವಿತ್ರಾಲಯದತ್ತ II

8 ಶತ್ರುಗಳು ಮುತ್ತಿಹರು, ಸತ್ಯ ಪಥದಲಿ ನಡೆಸೆನ್ನನು I ನೇರಮಾಡೆನಗೆ ದೇವಾ, ನಿನ್ನ ಸಿರಿಮಾರ್ಗವನು II

9 ಅವರ ಬಾಯಲಿ ಹುಸಿನುಡಿ, ಹೃದಯವಾದರೊ ವಿನಾಶದ ಶರಧಿ I ಅವರ ಜಿಹ್ವೆಯಲಿ ಮುಖಸ್ತುತಿ, ಕಂಠವಾದರೋ ತೆರೆದ ಸಮಾಧಿ II

10 ಅವರಪರಾಧಿಗಳೆಂದು ಹೇ ದೇವಾ, ನಿರ್ಣಯಿಸಿಬಿಡು I ಅವರ ಮೋಸದ ಪಾಶದಲೇ ಅವರನು ಸಿಕ್ಕಿಸಿಬಿಡು I ಅವರನೇಕ ಪಾಪಗಳಿಗಾಗಿ ಅವರನು ದಬ್ಬಿಬಿಡು I ಅವರು ನಿನ್ನ ವಿರುದ್ಧ ದಂಗೆಯೆದ್ದವರು, ನೋಡು II

11 ದೊರಕುವುದು ದೇವಾ, ನಿನ್ನಾಶೀರ್ವಾದ ಸಜ್ಜನರಿಗೆ I ಕವಚವಾದಂತಿಹುದು ನಿನ್ನ ಕರುಣೆ ಅಂಥವರಿಗೆ II ಎಂದೇ ಹರ್ಷಾನಂದಗೊಳ್ವರು ನಿನ್ನನಾಶ್ರಯಿಸಿದವರೆಲ್ಲರು I ನೀ ರಕ್ಷಿಸೆ, ಉಲ್ಲಾಸಗೊಳ್ಳುವರು ನಿನ್ನ ನಾಮಪ್ರಿಯರೆಲ್ಲರು II

  • Psalms 4 — previous chapter
  • Psalms 6 — next chapter
  • Psalms 5 — English (KJV)
  • Psalms 5 — English (WEB)
  • Psalms 5 — Tamil (தமிழ்)
  • Psalms 5 — Hindi (हिंदी)
  • Psalms 5 — Malayalam (മലയാളം)