ಕೀರ್ತನೆಗಳು 33 (Psalms 33)

Kannada Bible — Kannada (ಕನ್ನಡ)

1 ಸಜ್ಜನರೇ, ಮಾಡಿರಿ ಪ್ರಭುವಿನ ಗುಣಗಾನ I ನೀತಿವಂತರೇ, ಆತನ ಸ್ತುತಿ ನಿಮಗೆ ಸುಗುಣ II

2 ಪ್ರಭುವನು ಕೊಂಡಾಡಿ ಕಿನ್ನರಿಯನು ನುಡಿಸುತ I ಕೀರ್ತಿಸಿ ದಶತಂತಿ ವೀಣೆಯನು ಬಾರಿಸುತ II

3 ನೂತನ ಕೀರ್ತನೆಯನು ಆತನಿಗೆ ಹಾಡಿರಿ I ಇಂಪಾಗಿ ಬಾರಿಸಿ, ಸೊಂಪಾಗಿ ಭಜಿಸಿರಿ II

4 ಸತ್ಯವಾದುದು ಆತನ ಪವಿತ್ರ ವಾಕ್ಯ I ಸ್ತುತ್ಯವಾದುದು ಆತನ ಪುನೀತ ಕಾರ್ಯ II

5 ಸತ್ಯಸಂಧನು, ನ್ಯಾಯಪ್ರಿಯನು ಆತನು I ಅಚಲಪ್ರೀತಿಯಿಂದ ಜಗವನು ತುಂಬಿಹನು II

6 ಸೃಷ್ಟಿಯಾಯಿತು ಗಗನ ಮಂಡಲ ಆತನ ನುಡಿಯೊಂದಕೆ I ರೂಪುಗೊಂಡಿತು ತಾರಾ ಮಂಡಲ ಅವನುಸಿರು ಮಾತ್ರಕೆ II

7 ತುಂಬಿಟ್ಟಿಹನು ಜಲರಾಶಿಗಳನು ಕಡಲೆಂಬ ಕುಡಿಕೆಯಲಿ I ಕೂಡಿಟ್ಟಿಹನು ಜಲಾಶಯಗಳನು ಬುವಿಯುಗ್ರಾಣದಲಿ II

8 ಪೊಡವಿಯೆಲ್ಲವು ಭಯಪಡಲಿ ಪ್ರಭುವಿಗೆ I ಅಡಗಿ ನಡೆಯಲಿ ನಾಡಿಗರೆಲ್ಲ ಆತನಿಗೆ II

9 ಸೃಷ್ಟಿಯಾಯಿತು ಆತನ ನುಡಿ ಮಾತ್ರಕೆ I ಸ್ಥಾಪನೆಯಾಯಿತು ಅವನ ಅಣತಿಯೊಂದಕೆ II

10 ವ್ಯರ್ಥವಾಗಿಪನು ಪ್ರಭು ರಾಷ್ಟ್ರಯೋಜನೆಗಳನು I ನಿರರ್ಥಕವಾಗಿಪನು ಜನರ ದುಷ್ಟಸಂಕಲ್ಪಗಳನು II

11 ಪ್ರಭುವಿನ ಯೋಜನೆ ಶಾಶ್ವತ I ಅವನ ಸಂಕಲ್ಪ ಅನವರತ II

12 ಪ್ರಭುವನು ದೇವರಾಗಿ ಪಡೆದ ಜನಾಂಗ ಧನ್ಯ I ಸ್ವಜನರಾಗಿ ಆತನಾಯ್ದುಕೊಂಡ ಜನತೆ ಧನ್ಯ II

13 ವೀಕ್ಷಿಸುತಿಹನು ಪ್ರಭು ಸಮಸ್ತವನು ಪರದಿಂದ I ಲಕ್ಷಿಸುತಿಹನು ಮನುಜರನು ಸಿಂಹಾಸನದಿಂದ II

14 ಸ್ಥಾವರ ಸಿಂಹಾಸನದಿಂದ ನೋಡುತಿಹನು I ಸರ್ವ ಭೂನಿವಾಸಿಗಳನು ಪರಿಶೀಲಿಸುತಿಹನು II

15 ಅವರೆಲ್ಲರ ಹೃದಯಗಳನು ನಿರ್ಮಿಸಿದಾತನವನು I ಅವರವರ ಕೃತ್ಯಗಳನು ಪರೀಕ್ಷಿಸುತಿಹನು II

16 ಅರಸನಾವನು ವಿಜೇತನಾಗನು ಮಹಾ ಸೇನಾಬಲದಿಂದಲೆ I ಶೂರನಾವನು ಜಯಶೀಲನಾಗನು ಕೇವಲ ಭುಜಬಲದಿಂದಲೆ II

17 ಪ್ರಾಣರಕ್ಷಣೆಗೆ ಸಾಲದು ಅಶ್ವದಳ I ಆತ್ಮರಕ್ಷಣೆಗೆ ಬಾರದು ಅಶ್ವಬಲ II

18 ಪ್ರಭುವಾದರೋ ಕಟಾಕ್ಷಿಸುವನು ತನಗಂಜಿ ನಡೆದವರನು I ಲಕ್ಷಿಸುವನು ತನ್ನ ಕೃಪೆಯನು ನಿರೀಕ್ಷಿಸುವವರನು II

19 ತಪ್ಪಿಸುವನವನು ಪ್ರಾಣವನು ಮರಣದಿಂದ I ಉಳಿಸುವನು ಜೀವವನು ಕ್ಷಾಮಡಾಮರದಿಂದ II

20 ಕಾದಿದೆ ಎನ್ನ ಮನ ಪ್ರಭುವಿಗಾಗಿ I ಆತನಿಹನು ಎನಗೆ ಗುರಾಣಿಯಾಗಿ II

21 ನೆಮ್ಮದಿಯಿಂದಿದೆ ಎನ್ನ ಮನ ಆತನಲಿ I ನಂಬಿರುವೆವು ಆತನ ಶ್ರೀ ನಾಮದಲಿ II

22 ನಮ್ಮ ಮೇಲಿರಲಿ ಪ್ರಭು, ನಿನ್ನಚಲ ಪ್ರೀತಿ I ಕಾದಿಹೆವು ಇದೋ ನಿನ್ನ ನಂಬಿ ಭರವಸದಿ II

  • Psalms 32 — previous chapter
  • Psalms 34 — next chapter
  • Psalms 33 — English (KJV)
  • Psalms 33 — English (WEB)
  • Psalms 33 — Tamil (தமிழ்)
  • Psalms 33 — Hindi (हिंदी)
  • Psalms 33 — Malayalam (മലയാളം)