ಕೀರ್ತನೆಗಳು 116 (Psalms 116)

Kannada Bible — Kannada (ಕನ್ನಡ)

1 ನನಗಿದೆ ಪ್ರಭುವಿನಲ್ಲಿ ಪ್ರೀತಿ I ಆಲಿಸಿಹನಾತ ನನ್ನ ವಿನಂತಿ II

2 ಆತನೆನ್ನ ಮೊರೆಗೆ ಕಿವಿಗೊಟ್ಟ ನಿಮಿತ್ತ I ವಿಜ್ಞಾಪಿಸುವೆ ಜೀವಮಾನ ಪರಿಯಂತ II

3 ಸುತ್ತುಕೊಂಡಿದ್ದವೆನ್ನನು ಮೃತ್ಯುಪಾಶಗಳು I ಬಿಗಿಹಿಡಿದಿದ್ದವು ಪಾತಾಳ ವೇದನೆಗಳು I ಬಂದೊದಗಿದ್ದವೆನಗೆ ಕಷ್ಟಸಂಕಟಗಳು II

4 ಕೂಗಿ ಕರೆದೆನಾಗ ಪ್ರಭುವಿನ ಸಿರಿ ನಾಮವನು I “ಪ್ರಭು, ಉಳಿಸೆನ್ನ ಪ್ರಾಣವನು” ಎಂದು ಬೇಡಿದೆನು II

5 ಪ್ರಭು ಕೃಪಾಳು, ನ್ಯಾಯಪ್ರಿಯನು I ಕರುಣಾಮಯನು, ನಮ್ಮ ದೇವನು II

6 ಕಾಪಾಡುವನು ಪ್ರಭು ಸರಳ ಜೀವಿಗಳನು I ರಕ್ಷಿಸಿದನು ಕುಗ್ಗಿದವನಾಗಿದ್ದ ಎನ್ನನು II

7 ಹಿಂತಿರುಗು ನನ್ನ ಮನವೆ, ವಿಶ್ರಾಂತಿ ನೆಲೆಗೆ II ಮಹೋಪಕಾರಗಳನ್ನು ಎಸಗಿಹನು ಪ್ರಭು ನಿನಗೆ II

8 ತಪ್ಪಿಸಿಹನು ಮರಣಕೆ ನಾನೀಡಾಗದಂತೆ I ಸಂತೈಸಿಹನು ಕಂಬನಿಯ ನಾ ಸುರಿಸದಂತೆ I ಕಾಪಾಡಿಹನು ಕಾಲೆಡವಿ ನಾ ಬೀಳದಂತೆ II

9 ಎಂದೇ ನಡೆವೆನು ನಾನು ಪ್ರಭುವಿನ ಕಣ್ಮುಂದೆ I ಅಂತೆಯೇ ಬಾಳುವೆ ಜೀವಲೋಕದೊಳಿದ್ದೇ II

10 ನಾ ನುಡಿದೆನಾದರೂ ‘ಬಹಳ ಸಂಕಟದಲ್ಲಿರುವೆ’ನೆಂದು I ನಾನುಸುರಿದೆನಾದರೂ ‘ಯಾರನು ನಂಬಲಾಗ’ದೆಂದು I ನನ್ನಲ್ಲಿ ಅಳಿಯದೆ ಉಳಿಯಿತಾ ವಿಶ್ವಾಸವು ಎಂದೆಂದು II

12 ಪ್ರಭು ಎನಗೆ ಮಾಡಿದ ಮಹೋಪಕಾರಗಳಿಗಾಗಿ I ನನ್ನಿಂದೇನು ಮಾಡಲು ಸಾಧ್ಯ ಪ್ರತಿಯಾಗಿ? II

13 ಎತ್ತಿ ಹಿಡಿವೆನು ರಕ್ಷಣೆಯ ಪಾನಪಾತ್ರೆಯನು I ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು II

14 ಆತನಿಗೆ ನಾ ಹೊತ್ತ ಹರಕೆಗಳನು I ಆತನ ಸಭೆಮುಂದೆಯೆ ತೀರಿಸುವೆನು II

15 ಪ್ರಭು ಅಲ್ಪವೆಂದೆಣಿಸನು I ತನ್ನ ಭಕ್ತರ ಮರಣವನು II

16 ಹೇ ಪ್ರಭು, ಕರುಣಿಸು, ನಾ ನಿನ್ನ ಕಿಂಕರನು I ನಿನ್ನ ದಾಸಿಯ ಮಗನು, ನಿನ್ನ ಸೇವಕನು I ಬಿಡಿಸಿರುವೆ ನೀನು ನನ್ನ ಬಂಧನಗಳನು II

17 ಅರ್ಪಿಸುವೆ ನಾ ನಿನಗೆ ಕೃತಜ್ಞತಾ ಬಲಿಗಳನು I ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು II

18 ಹೇ ಜೆರುಸಲೇಮೇ, ನಿನ್ನ ಮಧ್ಯದೊಳು I ಆತನಿರುವ ಮಂದಿರದ ಅಂಗಳದೊಳು I ತೀರಿಸುವೆನು ಆತನ ಸಭೆಯ ಸಮ್ಮುಖದೊಳು I ಅರ್ಪಿಸುವೆನು ನಾ ಹೊತ್ತ ಆ ಹರಕೆಗಳನು II

  • Psalms 115 — previous chapter
  • Psalms 117 — next chapter
  • Psalms 116 — English (KJV)
  • Psalms 116 — English (WEB)
  • Psalms 116 — Tamil (தமிழ்)
  • Psalms 116 — Hindi (हिंदी)
  • Psalms 116 — Malayalam (മലയാളം)