Kannada Bible — Kannada (ಕನ್ನಡ)
1 ಪ್ರಭು ದಯಾಪೂರಿತ, ಆತನ ಪ್ರೀತಿ ಶಾಶ್ವತ I ತೋರಿ ಆತನಿಗೆ ನಿಮ್ಮ ಸ್ತೋತ್ರ ಕೃತಜ್ಞತಾ II
2 ವರ್ಣಿಸಬಲ್ಲವನಾರು ಆತನ ಮಹತ್ಕಾರ್ಯಗಳನು? I ಯೋಗ್ಯರೀತಿಯಲಿ ಹೊಗಳಬಲ್ಲವರಾರು ಆತನನು? II
3 ನ್ಯಾಯದಂತೆ ನಡೆಯುವವರು ಧನ್ಯರು I ಅವಿರತವಾಗಿ ನೀತಿವಂತರು ಧನ್ಯರು II
4 ಮರೆಯಬೇಡೆನ್ನನು ಪ್ರಭು, ನಿನ್ನ ಪ್ರಜೆಗೆ ದಯೆತೋರುವಾಗ I ನೆರವು ನೀಡೆನಗೆ ಸ್ವಾಮಿ, ನೀನಾ ಜನರನು ಉದ್ಧರಿಸುವಾಗ II
5 ನೀನಾರಿಸಿಕೊಂಡಿರುವ ಪ್ರಗತಿಯನು ನಾ ಕಾಣಮಾಡು I ನಿನ್ನ ಜನಾಂಗದವರ ಸಂತಸವನು ನಾ ಸವಿಯಮಾಡು I ನಿನ್ನ ಸ್ವಕೀಯರ ಮಹಿಮೆಯಲ್ಲೆನಗೆ ಪಾಲನ್ನು ನೀಡು II
6 ನಮ್ಮ ಪಿತೃಗಳಂತೆಯೆ ಪಾಪಿಗಳು ನಾವು I ಅಕ್ರಮಗೈದೆವು, ಅಪರಾಧಿಗಳಾದೆವು II
7 ಗ್ರಹಿಸಲಿಲ್ಲಾ ಪಿತೃಗಳು ನಿನ್ನದ್ಭುತಗಳನು ಈಜಿಪ್ಟಿನಲಿ I ಸ್ಮರಿಸಲಿಲ್ಲವರು ನಿನ್ನಚಲ ಪ್ರೇಮಾತಿಶಯಗಳನು ಅಲ್ಲಿ I ಬದಲಿಗೆ ಮಹೋನ್ನತನನೆ ಪ್ರತಿಭಟಿಸಿದರು ಕೆಂಗಡಲಬಳಿ II
8 ಆದರೂ ತನ್ನ ನಾಮಪ್ರಯುಕ್ತ ರಕ್ಷಿಸಿದನವರನು I ಪ್ರಕಟಿಸಿದನಾತ ಹೀಗೆ ತನ್ನ ಶಕ್ತಿಸಾಮರ್ಥ್ಯವನು II
9 ಒಣಗಿಹೋಯಿತಾ ಕೆಂಗಡಲು ಆತನ ಗದರಿಕೆಗೆ I ದಾಟಿಸಿದನಾ ಸಾಗರವನು ಅಡವಿಯೋ ಎಂಬ ಹಾಗೆ II
10 ತಪ್ಪಿಸಿದನವರನು ವೈರಿಗಳ ಕೈಯಿಂದ I ರಕ್ಷಿಸಿದನು ಆ ಶತ್ರುಗಳ ಹಿಡಿತದಿಂದ II
11 ಮುಳುಗಿಸಿತು ಜಲರಾಶಿ ಆ ಶತ್ರುಗಳನು I ಉಳಿಯಗೊಡಿಸಲಿಲ್ಲ ಅವರಲ್ಲೊಬ್ಬನನು II
12 ಆಗ ನಂಬಿದರು ಪ್ರಭುವಿನಾ ಮಾತನು I ಮಾಡಿದರಾಗ ಆತನ ಗುಣಗಾನವನು II
13 ಆದರೆ ಮರೆತರು ಬೇಗನೆ ಆತನ ಸತ್ಕಾರ್ಯಗಳನು I ಕಾಯದೆ ಹೋದರು ಆತನಾ ಸಂಕಲ್ಪ ಸಾದನೆಯನು II
14 ಆಶಾಪಾಶಗಳಿಗೆ ಈಡಾದರು ಅಡವಿಯೊಳು I ದೇವನನೇ ಪರಿಶೋಧಿಸಿದರು ಅರಣ್ಯದೊಳು II
15 ಪೂರೈಸಿದನಾತ ಅವರ ಕೋರಿಕೆಯನು I ಕಳುಹಿಸಿದನಾದರೆ ಭೀಕರ ರೋಗವನು II
16 ಅಸೂಯೆಗೊಂಡರು ಪಾಳೆಯದೊಳು ಮೋಶೆಯ ಮೇಲೆ I ಪ್ರಭುವಿಗೆ ಪ್ರತಿಷ್ಠಿತನಾದ ಆ ಆರೋನನ ಮೇಲೆ II
17 ಭೂಮಿ ಬಾಯ್ದೆರೆದು ನುಂಗಿತು ದಾತಾನನನು I ಮುಚ್ಚಿಬಿಟ್ಟಿತು ಅಭಿರಾಮನ ಕಡೆಯವರನು II
18 ಆ ಜನರ ಮಧ್ಯದಲಿ ಬೆಂಕಿ ಹಬ್ಬಿತು I ಅಗ್ನಿಜ್ವಾಲೆ ದಹಿಸಿಬಿಟ್ಟಿತು ಆ ದುಷ್ಟರನು II
19 ಹೋರೇಬಿನಲಿ ಮಾಡಿದರು ಬಸವನನು I ಆರಾಧಿಸಿದರು ಆ ಎರಕದ ಶಿಲೆಯನು II
20 ಈಪರಿ ತೊರೆದುಬಿಟ್ಟರು ತಮ್ಮ ಮಹಿಮಾ ದೇವರನು I ಆರಿಸಕೊಂಡರು ಹುಲ್ಲು ತಿನ್ನುವ ಬಸವನ ವಿಗ್ರಹವನು II
21 ಮರೆತುಬಿಟ್ಟರವರು ತಮ್ಮ ಮುಕ್ತಿದಾತ ದೇವನನು I ಈಜಿಪ್ಟಿನಲ್ಲಾತ ಎಸಗಿದ ಮಹತ್ಕಾರ್ಯಗಳನು II
22 ಹಾಮನಾಡಿನಲಿ ಮಾಡಿದ ಅದ್ಭುತಗಳನು I ಕೆಂಗಡಲಬಳಿ ನಡೆದ ಘೋರ ಕೃತ್ಯಗಳನು II
23 ಎಂತಲೇ ‘ಸಂಹರಿಸುವೆ’ ಎನ್ನಲು ಪ್ರಭು ಅವರನು I ಆಪ್ತ ಮೋಶೆಯು ಮಧ್ಯಸ್ಥನಾಗಿ ಬಂದನು I ಸಂಹರಿಸದಂತೆ ಶಮನಗೊಳಿಸಿದನಾ ಕೋಪವನು II
24 ಅವರೊ ಬೇಡವೆಂದರು ಆ ಚೆಲುವಿನ ನಾಡನು I ನಂಬದೆ ಹೋದರು ಅವನಿತ್ತಾ ವಾಗ್ದಾನವನು II
25 ಗೊಣಗುಟ್ಟಿದರು ತಮ್ಮ ಗುಡಾರಗಳಲಿ I ನಂಬಿಕೆಯಿಡಲಿಲ್ಲ ಆತನ ಮಾತಿನಲಿ II
26 ಈ ಕಾರಣ ಆಣೆಯಿಟ್ಟನು ಕೈಯೆತ್ತಿ : I “ಬೀಳಮಾಡುವೆನು ನಿಮ್ಮನು ಅಡವಿಯಲಿ, II
27 ಚದರಿಸುವೆನು ನಿಮ್ಮ ಸಂತಾನವನು ಹೊರನಾಡುಗಳಲಿ I ಅಳಿದು ಹೋಗುವರವರು ಅನ್ಯಜನಾಂಗಗಳ ಮಧ್ಯೆಯಲಿ” I
28 ಬಾಳ್ಪೆಗೋರ ದೇವತೆಯ ಊಳಿಗದವರಾದರು I ಸತ್ತವರಿಗರ್ಪಿಸಿದ ಬಲಿಯನು ಉಣ್ಣುವವರಾದರು II
29 ಅವರಕ್ರಮ ನಡತೆ ಪ್ರಭುವನು ಕೆಣಕಿತು I ಭೀಕರ ವ್ಯಾಧಿ ಅವರ ಮಧ್ಯೆ ಹಬ್ಬಿತು II
30 ಫಿನೆಹಾಸನೆದ್ದು ದಂಡಿಸಿದೊಡನೆ I ನಿಂತುಹೋಯಿತು ಆ ಘೋರ ಬೇನೆ II
31 ಆತ ಮಾಡಿದಾ ನೈಪುಣ್ಯ I ಆಯಿತು ತಲಾಂತರಕು ಗಣ್ಯ II
32 ಮೆರಿಬಾ ನದಿಯ ಬಳಿ ರೇಗಿಸಿದರಾತನನು I ಹೀಗೆ ಬರಮಾಡಿದರು ಮೋಶೆಗೂ ಹಾನಿಯನು II
33 ನಿಂತರಾಗ ದೇವರಾತ್ಮನಿಗೆ ವಿರೋಧವಾಗಿ I ನುಡಿಯಬೇಕಾಯಿತು ಮೋಶೆಯು ಅವಿವೇಕವಾಗಿ II
34 ಅನುಸರಿಸಲಿಲ್ಲ ಅವರು ಪ್ರಭುವಿನಾಜ್ಞೆಯನು I ಆತ ಸಂಹರಿಸಲಿಲ್ಲ ಶೋಧಿಸಿದಾ ಜನರನು II
35 ಅನ್ಯಜನರೊಡನವರು ಕಲೆತು ಬೆರೆತುಹೋದರು I ಅವರ ದುರಾಚಾರಗಳನ್ನೂ ಕಲಿತುಕೊಂಡರು II
36 ಪೂಜೆಮಾಡಿದರು ಆ ಜನರ ವಿಗ್ರಹಗಳಿಗೆ I ಉರುಲಾದವು ಆ ವಿಗ್ರಹಗಳೆ ಅವರಿಗೆ II
37 ತಮ್ಮ ಪುತ್ರ ಪುತ್ರಿಯರನೇ ಅರ್ಪಿಸಿದರು I ದೆವ್ವಭೂತಗಳಿಗೆ ಅವರನು ಬಲಿಕೊಟ್ಟರು II
38 ಸುರಿಸಿದರು ತಮ್ಮ ಮಕ್ಕಳ ನಿರ್ದೋಷ ರಕ್ತವನು I ಬಲಿಕೊಟ್ಟರು ಕಾನಾನ್ಯರ ವಿಗ್ರಹಗಳಿಗೆ ಅವರನು I ಹೊಲೆಮಾಡಿದರಂಥ ಕೊಲೆಗಳಿಂದ ದೇಶವನು II
39 ಅಶುದ್ಧರಾದರವರು ತಮ್ಮ ದುಷ್ಕೃತ್ಯಗಳಿಂದ I ದೇವದ್ರೋಹಿಗಳಾದರು ದುರಾಚಾರಗಳಿಂದ II
40 ಕೆರಳಿತು ಕೋಪ ಆ ಜನರ ಮೇಲೆ ಪ್ರಭುವಿಗೆ I ತನ್ನವರಾ ನಡತೆ ಅಸಹ್ಯವಾಯಿತು ಆತನಿಗೆ II
41 ಎಂತಲೆ ಒಪ್ಪಿಸಿದನವರನು ಅನ್ಯರಾಷ್ಟ್ರಗಳ ಕೈಗೆ I ಹಗೆಮಾಡುತ್ತಿದ್ದವರೇ ಅಧಿಕಾರಿಗಳಾದರವರಿಗೆ II
42 ಗುರಿಯಾದರು ಶತ್ರುಶೋಷಣೆಗೆ I ಕುಗ್ಗಿಹೋದವರು ಅವರ ಕೈಕೆಳಗೆ II
43 ಪ್ರಭು ಪದೇಪದೇ ವಿಮುಕ್ತಗೊಳಿಸಿದನಾದರೂ I ಪರ್ಯಾಲೋಚಿಸದೆ ಪ್ರತಿಭಟನೆ ಮಾಡಿದರವರು I ಈ ಪರಿಯ ಅಕ್ರಮದ ನಿಮಿತ್ತ ಅವನತಿಗಿಳಿದರು II
44 ನೋಡಿದನಾತ ಅವರ ಕಷ್ಟಕಾರ್ಪಣ್ಯವನು I ಗಮನಿಸಿದನು ಅವರ ಆರ್ತನಾದವನು II
45 ನೆನಪಿಗೆ ತಂದುಕೊಂಡನು ತನ್ನೊಡಂಬಡಿಕೆಯನು I ದಯಾಳುತನದಿಂದ ತೋರಿದನವರಿಗೆ ಕರುಣೆಯನು I ಬಂಧಿಸಿದವರಿಂದಲೂ ದಯೆಯನು ದೊರಕಿಸಿದನು II
47 ಹೇ ಪ್ರಭು, ನಮ್ಮ ದೇವಾ, ನಮ್ಮನ್ನುದ್ಧರಿಸು I ನಾಡುನಾಡುಗಳಿಂದ ನಮ್ಮನೊಂದುಗೂಡಿಸು I ನಿನ್ನ ಪವಿತ್ರ ನಾಮವನು ನಾವು ಭಜಿಸುವೆವು I ನಿನ್ನ ಸ್ತುತಿ ಸ್ತೋತ್ರಗಳಲಿ ಹೆಚ್ಚಳ ಪಡುವೆವು II
48 ಇಸ್ರಯೇಲಿನ ದೇವನಾದ ಪ್ರಭುವಿಗೆ ಸ್ತೋತ್ರ I ಅನಾದಿಯಿಂದ ಯುಗಯುಗಾಂತರಕು ಸ್ತೋತ್ರ I ಜನರೆಲ್ಲರು ಹೇಳಲಿ ‘ಆಮೆನ್’, ಪ್ರಭುವಿಗೆ ಸ್ತೋತ್ರ II