ಜ್ಞಾನೋಕ್ತಿಗಳು 13 (Proverbs 13)

Kannada Bible — Kannada (ಕನ್ನಡ)

1 ಬುದ್ಧಿವಂತ ಮಗ ತಂದೆಯ ಶಿಕ್ಷಣವನ್ನು ಕೇಳುವನು; ಕಿತ್ತಾಡುವ ಮಗ ಗದರಿಕೆಯನ್ನೂ ಕೇಳಲೊಲ್ಲನು.

2 ಸಜ್ಜನರ ಊಟ ಫಲಹಾರ; ವಂಚಕರ ಆಹಾರ ಹಿಂಸಾಚಾರ.

3 ಬಾಯಿಯನ್ನು ಕಾಯುವವನು ಜೀವವನ್ನು ಕಾಯುವನು; ತುಟಿಗಳನ್ನು ಹತೋಟಿಯಲ್ಲಿಡದವನು ನಾಶವಾಗುವನು.

4 ಸೋಮಾರಿಗೆ ಹಸಿದಿದ್ದರೂ ಊಟವಿಲ್ಲ; ಶ್ರಮಜೀವಿಗಳಿಗಾದರೋ ಬಲಿಷ್ಠರನ್ನಾಗಿಸುವ ಮೃಷ್ಟಾನ್ನ.

5 ಸಜ್ಜನನಿಗೆ ಮೋಸಮಾತು ಅಸಹ್ಯ; ದುರ್ಜನನ ನಡತೆ ನಿಂದಾಸ್ಪದ.

6 ನೀತಿ ಕಾಪಾಡುವುದು ನಿರ್ದೋಷಿಯನ್ನು; ಅನೀತಿ ಕೆಡವಿಬಿಡುವುದು ಪಾಪಿಯನ್ನು.

7 ಒಬ್ಬ ಹಣಕೂಡಿಸಿದ್ದರೂ ಘನದರಿದ್ರನಿರಬಹುದು; ಮತ್ತೊಬ್ಬ ಹಣವೆಚ್ಚಮಾಡಿ ಕಡುಬಡವನಾಗಿದ್ದರೂ ಐಶ್ವರ್ಯವಂತನಾಗಿರಬಹುದು.

8 ಹಣವಂತನ ಪ್ರಾಣರಕ್ಷಣೆಗೆ ಅವನ ಹಣವೇ ಈಡು; ಬಡವನಿಗೆ ಈಡಿನ ಬೆದರಿಕೆಯೂ ಇರದು.

9 ಸಜ್ಜನರ ಬೆಳಕು ಪ್ರಜ್ವಲಿಸುವುದು; ದುರ್ಜನರ ದೀಪವು ಆರಿಹೋಗುವುದು.

10 ಗರ್ವದಿಂದ ಹುಟ್ಟುವುದು ಕಲಹಕದನ; ಆಲೋಚನೆಯನ್ನು ಕೇಳುವುದು ಸುಜ್ಞಾನ.

11 ಬಿಟ್ಟಿಯಾಗಿ ಸಿಕ್ಕಿದ ಸಂಪತ್ತು ಬೇಗನೆ ಕರಗುವುದು; ದುಡಿದು ಕೂಡಿಸಿದ ಹಣ ಅಭಿವೃದ್ಧಿಯಾಗುವುದು.

12 ಕೋರಿದ್ದು ತಡವಾದರೆ ಮನಸ್ಸಿಗೆ ತುಡಿತ; ಕೈಗೂಡಿದ ಇಷ್ಟಾರ್ಥ ಜೀವವೃಕ್ಷ.

13 ದೇವವಾಕ್ಯವನ್ನು ಉಲ್ಲಂಘಿಸುವವನು ನಾಶವಾಗುವನು; ಆಜ್ಞೆಯನ್ನು ನಿಷ್ಠೆಯಿಂದ ಪಾಲಿಸುವವನು ಫಲಪಡೆಯುವನು.

14 ಜ್ಞಾನಿಯ ಬೋಧೆ ಜೀವದ ಬುಗ್ಗೆ; ಮಾಡುವುದದು ಮರಣದಿಂದ ಬಿಡುಗಡೆ.

15 ಸುಬುದ್ಧಿ ದಯಾಸ್ಪದ; ದುರಾಚಾರ ವಿನಾಶಕರ.

16 ಜಾಣನು ತಿಳುವಳಿಕೆಯಿಂದ ವರ್ತಿಸುತ್ತಾನೆ; ಮೂಢನು ಮೂರ್ಖತನವನ್ನು ತೋರ್ಪಡಿಸುತ್ತಾನೆ.

17 ಕೆಟ್ಟದೂತನು ಕೇಡಿಗೆ ಸಿಕ್ಕಿಸುವನು; ನಂಬಿಕಸ್ಥ ದೂತನು ಸುಕ್ಷೇಮಕಾರನು.

18 ಶಿಕ್ಷೆಯನ್ನು ಉಪೇಕ್ಷಿಸುವವನಿಗೆ ಕಾದಿದೆ ಬಡತನ ಹಾಗು ಅವಮಾನ; ಗದರಿಕೆಯನ್ನು ಗಮನಿಸುವವ ಹೊಂದುವನು ಸನ್ಮಾನ.

19 ಇಷ್ಟಸಿದ್ಧಿ ಮನಸ್ಸಿಗೆ ಸಿಹಿ; ಕೆಟ್ಟದ್ದನ್ನು ಬಿಡುವುದು ಮೂಢರಿಗೆ ಕಹಿ.

20 ಸುಜ್ಞಾನಿಗಳ ಸಹವಾಸದಿಂದ ಜನರು ಸುಜ್ಞಾನಿಗಳಾಗುವರು; ಅಜ್ಞಾನಿಗಳ ಒಡನಾಟದಿಂದ ಸಂಕಟಪಡುವರು.

21 ಅಮಂಗಳವು ಪಾಪಿಗಳನ್ನು ಹಿಂಬಾಲಿಸುವುದು; ಮಂಗಳವು ಸತ್ಪುರುಷರಿಗೆ ಸಿಗುವ ಪ್ರತಿಫಲವು.

22 ಒಳ್ಳೆಯವನ ಆಸ್ತಿ ಸಂತತಿಯವರಿಗೆ ಬಾಧ್ಯದ ಸೊತ್ತು; ಪಾಪಿಯ ಸೊತ್ತು ಸತ್ಪುರುಷರಿಗೆ ಸೇರುವ ಸಂಪತ್ತು.

23 ಬಡವರಿಗೆ ಬಂಜರುಭೂಮಿಯೂ ಬೆಳೆಯನ್ನೀಯುವುದುಂಟು; ಭಂಡತನ ಇರುವಲ್ಲಿ ಅದು ಕೂಡ ಹಾಳಾಗುವುದುಂಟು.

24 ಬೆತ್ತಹಿಡಿಯದ ತಂದೆ ಮಗನಿಗೆ ಶತ್ರು; ಎಚ್ಚರಿಕೆಯಿಂದ ಶಿಕ್ಷಿಸುವ ತಂದೆ ಮಗನಿಗೆ ಮಿತ್ರನು.

25 ನೀತಿವಂತನು ಹೊಟ್ಟೆತುಂಬ ಉಣ್ಣುವನು; ದುಷ್ಟನ ಹೊಟ್ಟೆ ಹಸಿವಿನಿಂದ ಬಳಲುವುದು.

  • Proverbs 12 — previous chapter
  • Proverbs 14 — next chapter
  • Proverbs 13 — English (KJV)
  • Proverbs 13 — English (WEB)
  • Proverbs 13 — Tamil (தமிழ்)
  • Proverbs 13 — Hindi (हिंदी)
  • Proverbs 13 — Malayalam (മലയാളം)