ಅರಣ್ಯಕಾಂಡ 17 (Numbers 17)

Kannada Bible — Kannada (ಕನ್ನಡ)

1 ಸರ್ವೇಶ್ವರ ಮೋಶೆಗೆ ಹೀಗೆಂದರು:

2 “ಇಸ್ರಯೇಲರ ಸಂಗಡ ನೀನು ಮಾತಾಡಿ ಒಂದೊಂದು ಕುಲದ ಅಧಿಪತಿಯಿಂದ ಒಂದೊಂದು ಕೋಲಿನ ಮೇರೆಗೆ ಹನ್ನೆರಡು ಕೋಲುಗಳನ್ನು ತೆಗೆದುಕೋ. ಅವನವನ ಕೋಲಿನ ಮೇಲೆ ಆಯಾ ಅಧಿಪತಿಯ ಹೆಸರನ್ನು ಬರೆಯಿಸು.

3 ಲೇವಿಯ ಕುಲಕ್ಕೂ ಒಂದು ಕೋಲು ಇರುವುದರಿಂದ ಅದರ ಮೇಲೆ ಆರೋನನ ಹೆಸರನ್ನು ಬರೆಯಿಸು.

4 ಆ ಕೋಲುಗಳನ್ನು ದೇವದರ್ಶನದ ಗುಡಾರದಲ್ಲಿ ಮಂಜೂಷದ ಮುಂದೆ ನಾನು ನಿನಗೆ ದರ್ಶನ ಕೊಡುವ ಸ್ಥಳದಲ್ಲಿ ಇಡು.

5 ಯಾರನ್ನು ನಾನು ಮೆಚ್ಚಿದ್ದೇನೋ ಅವನ ಕೋಲು ಚಿಗುರುವುದು. ನಿಮ್ಮಿಬ್ಬರ ವಿರುದ್ಧ ಇಸ್ರಯೇಲರು ಗೊಣಗುವುದು ಇನ್ನು ಕೇಳಿಸದಂತೆ ಹೀಗೆ ನಿಲ್ಲಿಸಿಬಿಡುತ್ತೇನೆ.”

6 ಅದರಂತೆಯೇ ಮೋಶೆ ಇಸ್ರಯೇಲರೊಡನೆ ಮಾತಾಡಿದನು. ಅವರ ಕುಲಾಧಿಪತಿಗಳೆಲ್ಲರೂ ಕುಲಕ್ಕೆ ಒಂದರಂತೆ ಹನ್ನೆರಡು ಕೋಲುಗಳನ್ನು ಅವನ ಕೈಗೆ ಕೊಟ್ಟರು. ಅವುಗಳೊಡನೆ ಆರೋನನ ಕೋಲು ಇತ್ತು.

7 ಮೋಶೆ ಆ ಕೋಲುಗಳನ್ನು ಮಂಜೂಷವಿರುವ ಗುಡಾರದಲ್ಲಿ ಸರ್ವೇಶ್ವರನ ಸನ್ನಿಧಿಯಲ್ಲಿ ಇಟ್ಟನು.

8 ಮಾರನೆಯ ದಿನ ಮೋಶೆ ಗುಡಾರದೊಳಗೆ ಹೋಗಿ ನೋಡಿದನು. ಏನಾಶ್ಚರ್ಯ! ಲೇವಿಕುಲದ ಪರವಾಗಿ ಆರೋನನು ಕೊಟ್ಟಿದ್ದ ಕೋಲು ಚಿಗುರಿತ್ತು; ಮೊಗ್ಗುಗಳು ಬಿಟ್ಟು, ಹೂವರಳಿ, ಬಾದಾಮಿ ಹಣ್ಣುಗಳನ್ನು ಫಲಿಸಿತ್ತು.

9 ಮೋಶೆ ಆ ಕೋಲುಗಳನ್ನೆಲ್ಲ ಸವೇಶ್ವರನ ಸನ್ನಿಧಿಯಿಂದ ಇಸ್ರಯೇಲರೆಲ್ಲರ ಬಳಿಗೆ ತಂದು ತೋರಿಸಿದನು. ಅವರು ತಮ್ಮ ತಮ್ಮ ಕೋಲುಗಳನ್ನು ಪರೀಕ್ಷಿಸಿ ತೆಗೆದುಕೊಂಡರು.

10 ಅನಂತರ ಸರ್ವೇಶ್ವರ ಮೋಶೆಗೆ: “ಆರೋನನ ಕೋಲನ್ನು ಮರಳಿ ಮಂಜೂಷದ ಮುಂದೆ ಇಡಬೇಕು. ದಂಗೆಯೇಳುವವರಿಗೆ ದೃಷ್ಟಾಂತವಾಗಿ ಅದು ಅಲ್ಲೇ ಇರಲಿ. ಇನ್ನು ಮುಂದೆ ಈ ಜನರು ನನಗೆ ವಿರುದ್ಧ ಗೊಣಗಿ ನಾಶವಾಗಬಾರದು. ಅದಕ್ಕಾಗಿ ನೀನು ಹೀಗೆ ಮಾಡು,” ಎಂದು ಆಜ್ಞಾಪಿಸಿದರು.

11 ಸರ್ವೇಶ್ವರನ ಅಪ್ಪಣೆಯ ಪ್ರಕಾರವೇ ಮೋಶೆ ಮಾಡಿದನು.

12 ಇಸ್ರಯೇಲರು ಮೋಶೆಯ ಬಳಿಗೆ ಬಂದು, “ಇಗೋ ನಾವು ನಾಶವಾಗಲಿದ್ದೇವೆ, ನಶಿಸಿಹೋಗುತ್ತೇವೆ, ನಿಶ್ಯೇಷವಾಗಿ ನಿರ್ಮೂಲವಾಗುವ ಹಾಗೆ ಕಾಣುತ್ತದೆ.

13 ಸರ್ವೇಶ್ವರನ ಗುಡಾರದ ಸಮೀಪಕ್ಕೆ ಬರುವವರೆಲ್ಲರು ಸಾಯಲೇ ಬೇಕಾದರೆ ಇನ್ನು ನಾವೆಲ್ಲರು ಸತ್ತಹಾಗೆ ತಾನೆ?” ಎಂದರು.

  • Numbers 16 — previous chapter
  • Numbers 18 — next chapter
  • Numbers 17 — English (KJV)
  • Numbers 17 — English (WEB)
  • Numbers 17 — Tamil (தமிழ்)
  • Numbers 17 — Hindi (हिंदी)
  • Numbers 17 — Malayalam (മലയാളം)