ಮಲಾಕಿ 4 (Malachi 4)

Kannada Bible — Kannada (ಕನ್ನಡ)

1 “ಇಗೋ, ಆ ದಿನ ಬರುತ್ತಿದೆ. ಒಲೆಯಂತೆ ಉರಿಯುತ್ತಿದೆ. ಎಲ್ಲ ಅಹಂಕಾರಿಗಳು, ದುಷ್ಕರ್ಮಿಗಳು, ಒಣಹುಲ್ಲಿನಂತೆ ಆಗಿಹೋಗಿದ್ದಾರೆ. ಆದ್ದರಿಂದ ಬರಲಿರುವ ಆ ದಿನದಂದು ಸುಟ್ಟು ಭಸ್ಮವಾಗುತ್ತಾರೆ. ಬುಡ ರೆಂಬೆಸಹಿತ ಬೂದಿಯಾಗುತ್ತದೆ,” ಎನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರ.

2 “ನನ್ನ ನಾಮದಲ್ಲಿ ಭಯಭಕ್ತಿಯಿಂದ ಇರುವ ನಿಮಗಾದರೋ ಜೀವೋದ್ಧಾರಕನೆಂಬ ಸೂರ್ಯನು ಉದಯಿಸಿ, ಸುಕ್ಷೇಮವನ್ನೀಯುವ ಕಿರಣಗಳನ್ನು ಬೀರುವನು. ಕೊಟ್ಟಿಗೆಯಿಂದ ಹೊರಬಂದ ಕರುಗಳಂತೆ ನೀವು ಕುಣಿದು ಕುಪ್ಪಳಿಸುವಿರಿ.

3 ನಾನು ಕಾರ್ಯತತ್ಪರನಾಗುವ ದಿನದಂದು ನೀವು ದುಷ್ಟರನ್ನು ತುಳಿದುಬಿಡುವಿರಿ. ಅವರು ನಿಮ್ಮ ಕಾಲಡಿಯ ಧೂಳಿಯಾಗುವರು.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.

4 “ನಾನು ನನ್ನ ದಾಸನಾದ ಮೋಶೆಗೆ ಬೋಧಿಸಿದ ಧರ್ಮಶಾಸ್ತ್ರವನ್ನು ಜ್ಞಾಪಕಕ್ಕೆ ತಂದುಕೊಳ್ಳಿ. ಆ ವಿಧಿನಿಯಮಗಳನ್ನು ಆತನಿಗೆ ಹೋರೇಬ್ ಬೆಟ್ಟದಲ್ಲಿ ಕೊಟ್ಟದ್ದು ಇಸ್ರಯೇಲರು ಅವುಗಳನ್ನು ಅನುಸರಿಸಲೆಂದೇ.”

5 “ಇಗೋ, ಸರ್ವೇಶ್ವರಸ್ವಾಮಿಯ ಆಗಮನದ ಭಯಂಕರ ಮಹಾದಿನ ಬರುವುದಕ್ಕೆ ಮುಂಚೆ ಪ್ರವಾದಿ ಎಲೀಯನನ್ನು ನಿಮ್ಮಲ್ಲಿಗೆ ಕಳುಹಿಸುವೆನು.

6 ನಾನು ಬಂದು ಲೋಕವನ್ನು ಶಪಿಸಿ ನಾಶಗೊಳಿಸದಂತೆ ಆತನು ಹೆತ್ತವರ ಮನಸ್ಸನ್ನು ಮಕ್ಕಳ ಕಡೆಗೂ, ಮಕ್ಕಳ ಮನಸ್ಸನ್ನು ಹೆತ್ತವರ ಕಡೆಗೂ ಒಲಿಸಿ ಅವರನ್ನು ಒಂದಾಗಿಸುವನು.”

  • Malachi 3 — previous chapter
  • Matthew 1 — next chapter
  • Malachi 4 — English (KJV)
  • Malachi 4 — English (WEB)
  • Malachi 4 — Tamil (தமிழ்)
  • Malachi 4 — Hindi (हिंदी)
  • Malachi 4 — Malayalam (മലയാളം)