ಯೋನ 3 (Jonah 3)

Kannada Bible — Kannada (ಕನ್ನಡ)

1 ಯೋನನಿಗೆ ಆ ಸ್ವಾಮಿಯ ವಾಣಿ ಪುನಃ ಕೇಳಿಸಿತು:

2 “ಎದ್ದು ಮಹಾನಗರವಾದ ನಿನೆವೆಗೆ ಹೋಗು. ನಾನು ನಿನಗೆ ತಿಳಿಸಿದ ಸಂದೇಶವನ್ನು ಅಲ್ಲಿಯ ನಿವಾಸಿಗಳಿಗೆ ಸಾರು,” ಎಂದಿತು.

3 ಸ್ವಾಮಿಯ ಆಜ್ಞಾನುಸಾರ ಯೋನನು ನಿನೆವೆಗೆ ಹೋದನು. ಅದೊಂದು ವಿಸ್ತಾರವಾದ ನಗರ. ಅದನ್ನು ಹಾದುಹೋಗಲು ಮೂರು ದಿನಗಳು ಹಿಡಿಯುತ್ತಿತ್ತು.

4 ನಗರವನ್ನು ಪ್ರವೇಶಿಸಿ ಒಂದು ದಿನದ ಪ್ರಯಾಣಮಾಡಿದ ನಂತರ ಯೋನನು ಸ್ವಾಮಿಯ ಸಂದೇಶವನ್ನು ಸಾರುತ್ತಾ, “ಜನರೇ, ಕೇಳಿ: ನಿಮ್ಮ ನಗರ ನಲವತ್ತು ದಿನಗಳಲ್ಲಿ ನಾಶವಾಗುವುದು,” ಎಂದನು.

5 ಆ ನಗರದ ನಿವಾಸಿಗಳು ದೇವರ ಸಂದೇಶವನ್ನು ನಂಬಿದರು. ಪ್ರತಿಯೊಬ್ಬನೂ ಉಪವಾಸ ಕೈಗೊಳ್ಳಬೇಕೆಂದು ನಿರ್ಧರಿಸಿದರು. ಹಿರಿಯರು ಮೊದಲುಗೊಂಡು ಕಿರಿಯರವರೆಗೆ - ಎಲ್ಲರೂ ಮನಃಪರಿವರ್ತನೆಯ ಚಿಹ್ನೆಯಾಗಿ ಗೋಣಿತಟ್ಟನ್ನು ಉಟ್ಟುಕೊಂಡರು.

6 ಈ ಸಂಗತಿ ನಿನೆವೆಯ ಅರಸನ ಕಿವಿಗೆ ಬಿದ್ದಿತು. ಅವನು ಸಿಂಹಾಸನದಿಂದ ಇಳಿದು, ತನ್ನ ರಾಜವಸ್ತ್ರಗಳನ್ನು ತೆಗೆದುಬಿಟ್ಟು, ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯಲ್ಲಿ ಕುಳಿತುಕೊಂಡನು.

7 ಕೂಡಲೇ ತನ್ನ ಪ್ರಜೆಗಳಿಗೆ ಈ ರಾಜಾಜ್ಞೆಯನ್ನು ನಿನೆವೆಯಲ್ಲಿ ಹೊರಡಿಸಿದನು: “ಅರಸನ ಹಾಗೂ ಆತನ ಆಪ್ತ ಪ್ರಮುಖರ ಆಜ್ಞೆಯಿದು: ಜನರಾಗಲೀ, ದನಕರುಗಳಾಗಲೀ, ಕುರಿಮೇಕೆಗಳಾಗಲೀ, ಯಾರೂ ಏನನ್ನೂ ತಿನ್ನಬಾರದು, ಕುಡಿಯಲೂಬಾರದು.

8 ಎಲ್ಲ ಜನರೂ ಗೋಣಿತಟ್ಟನ್ನು ಉಟ್ಟುಕೊಳ್ಳಬೇಕು; ಪ್ರಾಣಿಗಳಿಗೂ ಹೊದಿಸಬೇಕು. ದೇವರನ್ನು ಶ್ರದ್ಧೆಯಿಂದ ಪ್ರಾರ್ಥಿಸಬೇಕು. ಎಲ್ಲರೂ ದೌರ್ಜನ್ಯವನ್ನು ತ್ಯಜಿಸಿ, ಹಿಂಸಾಚಾರವನ್ನು ಕೈಬಿಡಬೇಕು.

9 ಹೀಗೆ ಮಾಡಿದ್ದೇ ಆದರೆ, ದೇವರು ಒಂದುವೇಳೆ ತಮ್ಮ ಮನಸ್ಸನ್ನು ಬದಲಾಯಿಸಿ, ತಮ್ಮ ಉಗ್ರಕೋಪವನ್ನು ತಡೆದಾರು, ನಾವು ನಾಶವಾಗದೆ ಉಳಿದೇವು.”

10 ಆ ಜನರು ಮಾಡಿದುದೆಲ್ಲವನ್ನು ದೇವರು ಗಮನಿಸಿದರು. ತಮ್ಮ ದುರ್ನಡತೆಯನ್ನು ಜನರು ಕೈಬಿಟ್ಟದ್ದನ್ನು ಕಂಡು, ಮನಮರುಗಿ ಅವರಿಗೆ ವಿಧಿಸಬೇಕೆಂದಿದ್ದ ಶಿಕ್ಷೆಯನ್ನು ತಡೆಹಿಡಿದರು.

  • Jonah 2 — previous chapter
  • Jonah 4 — next chapter
  • Jonah 3 — English (KJV)
  • Jonah 3 — English (WEB)
  • Jonah 3 — Tamil (தமிழ்)
  • Jonah 3 — Hindi (हिंदी)
  • Jonah 3 — Malayalam (മലയാളം)