1 ಕೊರಿಂಥ 13 (1 Corinthians 13)

Kannada Bible — Kannada (ಕನ್ನಡ)

1 ಸುರನರರ ನುಡಿಗಳ ನಾನಾಡಬಲ್ಲೆನಾದರೂ ಪರಮ ಪ್ರೀತಿಯೊಂದೆನಗಿಲ್ಲದಿರಲು ನಾ ಕೇವಲ ಗಣಗಣಿಸುವ ಘಂಟೆ, ಝಣಝಣಿಸುವ ಜಾಗಟೆ.

2 ಪ್ರವಾದನೆಯ ವರವೆನಗಿರಬಹುದು ಇರಬಹುದು ನಿಗೂಢ ರಹಸ್ಯಗಳರಿವು ಎಲ್ಲದರ ಪರಿಜ್ಞಾನ, ಪರ್ವತವನೇ ಕದಲಿಪ ವಿಶ್ವಾಸ ಪ್ರೀತಿಯೊಂದಿಲ್ಲದಿರೆ ನಾ ಶೂನ್ಯಸಮಾನ.

3 ನನಗಿರುವುದೆಲ್ಲವನು ನಾ ದಾನಮಾಡೆ ದೇಹವನೆ ಸಜೀವ ದಹಿಸಲು ನೀಡೆ ನಾನಾಗಿರೆ ಪರಮ ಪ್ರೀತಿ ವಿಹೀನ ಏನದು ಜೀವನ, ನನಗೇನದು ಪ್ರಯೋಜನ?

4 ಸಹನೆ ಸೈರಣೆ, ದಯೆದಾಕ್ಷಿಣ್ಯ ಪ್ರೀತಿಯಲ್ಲಿವೆ. ಎಡೆಯಿಲ್ಲ ಅದರಲಿ ಗರ್ವಕೆ, ಮರ್ಮಕೆ, ಮೆರೆತಕೆ, ಮತ್ಸರಕೆ, ಸಿಡುಕಿಗೆ, ಸೊಕ್ಕಿಗೆ, ಸ್ವಾರ್ಥಕೆ, ಸೇಡುಗಳೆಣಿಕೆಗೆ. ನಲಿಯದು ಪ್ರೀತಿ ಅನೀತಿಯಲಿ ನಲಿಯದಿರದದು ಸತ್ಯದ ಜಯದಲಿ.

7 ನಂಬುವುದೆಲ್ಲವನು, ನಿರೀಕ್ಷಿಸುವುದೆಲ್ಲವನು, ಸಹಿಸಿಕೊಳ್ಳುವುದು ಸಮಸ್ತವನು ಪ್ರೀತಿಯದೆಂದೂ ಅರಿಯದು ಸೋಲನು.

8 ಅಳಿದುಹೋಗುವುವು ಭವಿಷ್ಯವಾಣಿ ಗತಿಸಿಹೋಗುವುದು ಬಹುಭಾಷಾ‍ ಶಕ್ತಿ ಹೋಗುವುವು ನಶಿಸಿ ಜ್ಞಾನ, ಬುದ್ಧಿ. ಆದರೆ ಅಮರವಾದುದು ಪರಮ ಪ್ರೀತಿ.

10 ಅಪೂರ್ವವಾದುದು ನಮ್ಮಾ ಅರಿವೆಲ್ಲ ಪೂರ್ಣವಾದುದಲ್ಲ ಪ್ರವಾದನವದೆಲ್ಲ; ಪರಿಪೂರ್ಣತೆ ಪ್ರಾಪ್ತವಾಗಲು ಇಲ್ಲವಾಗುವುದು ಅಪೂರ್ಣತೆಯೆಲ್ಲ.

11 ಬಾಲಕ ನಾನಾಗಿರೆ ಆಡಿದೆ, ಮಾತಾಡಿದೆ, ಚಿಂತಿಸಿದೆ, ಸುಖದುಃಖಗಳ ಸವಿದೆ ಬಾಲಕನಂತೆ. ಬಲಿತು ಬೆಳೆದು ಮನುಜನಾದುದೆ ಬಾಲಿಶವಾದುದೆಲ್ಲವನು ಬದಿಗೊತ್ತಿದೆ.

12 ನಾವೀಗ ಕಾಂಬುದು ದರ್ಪಣದ ಬಿಂಬವನು ಮುಸುಕಾಗಿ ತರುವಾಯ ಕಾಂಬೆವು ದೇವರನು ಮುಖಾಮುಖಿಯಾಗಿ. ಈಗಿರುವುದೆನ್ನ ಅರಿವು ತುಂಡುತುಂಡಾಗಿ ನಂತರ ದೇವನೆನ್ನ ಅರಿತಂತೆ ಈ ಮೂರಲಿ ನಾನರಿವೆನು ಅಖಂಡವಾಗಿ.

13 ನಿಲ್ಲುವುವು ನಂಬಿಕೆ, ನಿರೀಕ್ಷೆ, ಪ್ರೀತಿ ನೆಲೆಯಾಗಿ; ಈ ಮೂರಲಿ ಪ್ರೀತಿಯೇ ಪರಮೋನ್ನತವೆಂಬುದ ನೀನರಿ.

  • 1 Corinthians 12 — previous chapter
  • 1 Corinthians 14 — next chapter
  • 1 Corinthians 13 — English (KJV)
  • 1 Corinthians 13 — English (WEB)
  • 1 Corinthians 13 — Tamil (தமிழ்)
  • 1 Corinthians 13 — Hindi (हिंदी)
  • 1 Corinthians 13 — Malayalam (മലയാളം)